ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರಕ್ಕೆ ಶಿಲಾನ್ಯಾಸ ಹಾಗೂ ನಿಧಿ ಸಮರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಶನಿವಾರ ಬೆಳಿಗ್ಗೆ 8.22 ರ ಸುಮುಹೂರ್ತದಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳ ದಿವ್ಯಹಸ್ತದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಶ್ರೀಗಳ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು, ದೇವಾಲಯಗಳು ಮಾನವ ಕುಲಕೋಟಿಗೆ ಧನಾತ್ಮಕ ಶಕ್ತಿ ನೀಡುವ ಪ್ರಧಾನ ಕೇಂದ್ರಗಳಾಗಿದ್ದು, ಕಾಲಾಕಾಲಕ್ಕೆ ಅಗತ್ಯದ ನವೀಕರಣಗಳನ್ನು ಮಾಡಬೇಕಾಗಿರುವುದು ಕರ್ತವ್ಯವಾಗಿದೆ. ಭಕ್ತರು ಒಗ್ಗಟ್ಟಿನಿಂದ ಕ್ಷೇತ್ರಗಳ ಪುನರುತ್ಥಾನಕ್ಕೆ ಕೈಜೋಡಿಸುವುದರಿಂದ ಸನಾತನತೆ ದೃಢಗೊಳ್ಳುವುದು ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನಗೈದು, ಪ್ರತಿಕೂಲ ವಿದ್ಯಮಾನಗಳ ಗೊಂದಲಗಳ ಮಧ್ಯೆ ಭಗವದನುಗ್ರಹದ ಹೊರತು ನೆಮ್ಮದಿ ಪ್ರಾಪ್ತವಾಗದು. ರಾಜಗೋಪುರ ನಿರ್ಮಾಣ ತೊಡಕುಗಳಿಲ್ಲದೆ ಶೀಘ್ರ ಸಂಪನ್ನಗೊಳ್ಳಲಿ ಎಂದು ತಿಳಿಸಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಹಿತನುಡಿಗಳಿಂದ ಶುಭಹಾರೈಸಿದರು. ಕ್ಷೇತ್ರ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಸುಬ್ಬಯ್ಯ ರೈ, ಲಕ್ಷ್ಮೀಶ ಭಂಡಾರಿ, ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ಕೃಷ್ಣರಾಜ ವರ್ಮ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಜೀರ್ಣೋದ್ದಾರ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಸ್ವಾಗತಿಸಿ, ಕಾರ್ಯದರ್ಶಿ ಶಂಕರ ಆಳ್ವ ವಂದಿಸಿದರು. ಜೊತೆ ಕಾರ್ಯದರ್ಶಿ ಜಯಾನಂದ ರಾವ್ ನಿರೂಪಿಸಿದರು. ಈ ಸಂದರ್ಭ ಕ್ಷೇತ್ರದಲ್ಲಿ ನಡೆದ ಶ್ರಮದಾನದಲ್ಲಿ ನಿರಂತರವಾಗಿ ಭಾಗವಹಿಸಿದ್ದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.