ಮುಂಬೈ: ಕೋವಿಡ್ ಪ್ರಕರಣಗಳು ಸತತವಾಗಿ ಏರುತ್ತಲೇ ಇರುವುದರಿಂದ ಮುಂಬೈನಲ್ಲಿ ಮುಂದಿನ 5-6 ವಾರಗಳಲ್ಲಿ ಮೂರು ಬೃಹತ್ ಆಸ್ಪತ್ರೆಗಳನ್ನು ಆರಂಭಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
'ಈ ಆಸ್ಪತ್ರೆಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಆರಂಭಿಸಲಾಗುವುದು. ಪ್ರತಿಯೊಂದು ಆಸ್ಪತ್ರೆಯಲ್ಲಿ 200 ಐಸಿಯು ಬೆಡ್ ಹಾಗೂ ಆಮ್ಲಜನಕ ವ್ಯವಸ್ಥೆಯುಳ್ಳ ಶೇಕಡ 70ರಷ್ಟು ಬೆಡ್ ಸೇರಿದಂತೆ ಒಟ್ಟು 2000 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು' ಎಂದು ನಗರದ ನಾಗರಿಕ ಸೇವೆಗಳ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಹಲ್ ಅವರು ಸೋಮವಾರ ತಿಳಿಸಿದರು.
ಕೆಲವು 4-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಲು ಈಗಾಗಲೇ ಮನವಿ ಮಾಡಲಾಗಿದೆ. ಇಲ್ಲಿನ ಸೌಲಭ್ಯಗಳನ್ನು ಪ್ರಮುಖ ಖಾಸಗಿ ಆಸ್ಪತ್ರೆಗಳ ವೃತ್ತಿಪರ ವೈದ್ಯರು ನೋಡಿಕೊಳ್ಳಲಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.
'ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು. ಇದರಿಂದ ಅವಶ್ಯಕತೆ ಇರುವ ಇತರೆ ರೋಗಿಗಳಿಗೆ ಹಾಸಿಗೆಗಳು ಲಭ್ಯವಾಗಲಿವೆ' ಎಂದು ಬಿಎಂಸಿ ಆಯುಕ್ತರು ಹೇಳಿದರು.
'ನಗರದ ವಿವಿಧ ಆಸ್ಪತ್ರೆಗಳಲ್ಲಿ ಹೊಸದಾಗಿ 325 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ನಗರದಲ್ಲಿ ಒಟ್ಟು 2,466 ಐಸಿಯು ಬೆಡ್‌ಗಳಿವೆ. ಒಟ್ಟು 141 ಆಸ್ಪತ್ರೆಗಳಲ್ಲಿ 19,151 ಹಾಸಿಗೆಗಳಿವೆ. ಇದರಲ್ಲಿ ಕೋವಿಡ್ ರೋಗಿಗಳಿಗೆ ಮೀಸಲಿಟ್ಟ ಹಾಸಿಗೆಗಳ ಪೈಕಿ 3,777 ಹಾಸಿಗೆಗಳು ಖಾಲಿ ಇವೆ' ಎಂದು ಚಹಲ್ ತಿಳಿಸಿದರು.
ಭಾನುವಾರ ಮುಂಬೈನಲ್ಲಿ 9,986 ಹೊಸ ಪ್ರಕರಣಗಳು ವರದಿಯಾಗಿವೆ. ಹೊಸದಾಗಿ 79 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಕರಣಗಳ ಸಂಖ್ಯೆ 5,20,498 ಮತ್ತು ಮೃತರ ಸಂಖ್ಯೆ 12,023ಕ್ಕೆ ಏರಿಕೆಯಾಗಿದೆ.