ನವದೆಹಲಿ: 'ರಾಷ್ಟ್ರೀಯ ಪಂಚಾಯತ್ ರಾಜ್ ದಿನ'ವಾದ ಇಂದು (ಏ.24) ಕಾಂಗ್ರೆಸ್ ಪಕ್ಷವು ತನ್ನ ಡಿಜಿಟಲ್ ಮಾಧ್ಯಮ ವೇದಿಕೆಯಾದ 'ಐಎನ್‌ಸಿ ಟಿ.ವಿ' ಚಾನಲ್ ಆರಂಭಿಸಿತು. ಈ ಮೂಲಕ ಪಕ್ಷ ಜನರನ್ನು ನೇರವಾಗಿ ತಲುಪಲು ಉದ್ದೇಶಿಸಿದೆ.
ದೇಶದಲ್ಲಿ ವಿವಿಧ ಸಂಸ್ಥೆಗಳು ಇಂದು ಸರ್ಕಾರದಿಂದ ದಾಳಿಗೆ ಒಳಗಾಗುತ್ತಿವೆ. ಆದರೆ, ಇದು ಮಾಧ್ಯಮಗಳಲ್ಲಿ ಸರಿಯಾಗಿ ಬಿಂಬಿತವಾಗುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.
ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಅವರು, ಸರ್ಕಾರವು ಪ್ರಸಾರ ಮಾಡಲು ಅವಕಾಶ ನೀಡದ ಸುದ್ದಿಗಳು ಐಎನ್‌ಸಿ ಟಿ.ವಿಯಲ್ಲಿ ಪ್ರಮುಖವಾಗಿ ಸ್ಥಾನ ಪಡೆಯಲಿವೆ. ಈ ಮೂಲಕ ಜನರಿಗೆ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಿದರು.
ವರ್ಚುವಲ್ ಸ್ವರೂಪದಲ್ಲಿ ಚಾನಲ್‌ಗೆ ಚಾಲನೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಈ ಚಾನಲ್ ಜನರಿಗೆ ಧ್ವನಿಯಾಗಲಿದೆ. ಕಡುಬಡವರ ಸಮಸ್ಯೆಗಳತ್ತ ಗಮನಸೆಳೆಯಲಿದೆ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್, ಸಂಚಾಲಕ ಪವನ್ ಬನ್ಸಾಲ್, ವಕ್ತಾರ್ ಪವನ್ ಖೇರಾ ಅವರು ಇದ್ದರು.