ತಿರುವನಂತಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಪ್ರಚಾರಕ್ಕಾಗಿ ನಿನ್ನೆ ಕೇರಳಕ್ಕೆ ಆಗಮಿಸಿದರು. ಜೆ.ಪಿ.ನಡ್ಡಾ ಅವರು ಅಟ್ಟಿಂಗಲ್, ಯೋಗಿ ಅವರು ಕಳಕೂಟ್ಟಂ ಮತ್ತು ನೇಮಂನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಏ.2 ರಂದು ಪ್ರಧಾನಿ ನರೇಂದ್ರ ಮೋದಿ ಕೂಡ ಕೇರಳಕ್ಕೆ ಆಗಮಿಸಲಿದ್ದಾರೆ.
ವಿಧಾನಸಭಾ ಚುನಾವಣಾ ಪ್ರಚಾರವು ಕಾವೇರುತ್ತಿರುವಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಪ್ರಚಾರಕ್ಕಾಗಿ ಕೇರಳಕ್ಕೆ ಬರುತ್ತಿದ್ದಾರೆ. ಜೆ.ಪಿ.ನಡ್ಡಾ ಅವರು ಕರುನಾಗಪಳ್ಳಿ, ಆರಣ್ಮುಲ ಮತ್ತು ಚಂಗನಾಸ್ಸೆರಿ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯ ಫಯರ್ ಬ್ರಾಂಡ್ ನಾಯಕ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳಕೂಟಂ ಮತ್ತು ನೇಮಂ ಗಳಲ್ಲಿ ರೋಡ್ ಶೋ ನಡೆಸುವರು. ಕಳಕೂಟ್ಟಂನಲ್ಲಿ ರಾಷ್ಟ್ರೀಯ ನಾಯಕರು ಪ್ರಚಾರ ಮಾಡುತ್ತಿಲ್ಲ ಎಂಬ ಆರೋಪಗಳಿಗೆ ಯೋಗಿಯ ರೋಡ್ ಶೋ ಪ್ರತಿಕ್ರಿಯೆಯಾಗಿರುತ್ತದೆ. ಯೋಗಿ ಹರಿಪ್ಪಾಡ್, ಅಡೂರ್, ಪಾರಶಾಲ ಮತ್ತು ಕಾಟ್ಟಾಕಡ ಮುಂತಾದ ಕ್ಷೇತ್ರಗಳಿಗೂ ಭೇಟಿ ನೀಡುತ್ತಾರೆ.
ಎರಡನೇ ಹಂತದ ಅಭಿಯಾನಕ್ಕಾಗಿ ಇಂದು (ಏ.2) ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನರೇಂದ್ರ ಮೋದಿ ಅವರು ಕೊನ್ನಿ ಮತ್ತು ತಿರುವನಂತಪುರಂನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಕಾರ್ಯಕ್ರಮಗಳಿಗೆ ಕೊನ್ನಿ ಮತ್ತು ತಿರುವನಂತಪುರಂನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಿದ್ಧರಿಲ್ಲದ ಕಾರಣ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಿತು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಏಪ್ರಿಲ್ 3 ರಂದು ಉತ್ತರ ಕೇರಳಕ್ಕೆ ಮತ್ತು ಅಮಿತ್ ಶಾ ಅವರು ಮಂಜೇಶ್ವರ, ಕೋಝಿಕೋಡ್ ನಾರ್ತ್, ಅಡೂರ್ ಮತ್ತು ಚೇರ್ತಾಲಾಕ್ಕೆ ಆಗಮಿಸಲಿದ್ದಾರೆ.