ಕೊರೊನಾ ಕಾರಣದಿಂದಾಗಿ ಕಂಗೆಟ್ಟಿರುವ ಜನಸಾಮಾನ್ಯರು ಅದಕ್ಕಿಂತಲೂ ಹೆಚ್ಚು ಕಂಗಾಲಾಗಿರುವುದು ಲಾಕ್‍ಡೌನ್‌ನ ಭೀತಿಯಿಂದಾಗಿ! ಲಾಕ್‌ಡೌನ್ ಪ್ರಸ್ತಾವ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ದೃಶ್ಯಮಾಧ್ಯಮಗಳಲ್ಲಿ ಮಾತ್ರ ಅದೇ ಊಹಾಪೋಹ. ಲಾಕ್‍ಡೌನ್ ಬಗ್ಗೆಯೇ ಹೆಚ್ಚು ಚರ್ಚೆ. ಕಳೆದ ವರ್ಷ ಲಾಕ್‍ಡೌನ್ ಜಾರಿಗೊಳಿಸಿದ್ದರ ಪರಿಣಾಮವನ್ನು ಜನ ಕಂಡುಂಡಿದ್ದಾರೆ. ಸರ್ಕಾರದ ಅರ್ಥ ವ್ಯವಸ್ಥೆಯೂ ಅಧೋಗತಿಗಿಳಿದಿದ್ದನ್ನು ಅಲ್ಲಗಳೆ ಯಲಾಗದು.
ಕೊರೊನಾ ಪ್ರಸರಣವನ್ನು ಬರೀ ಲಾಕ್‍ಡೌನ್ ನಿಂದ ಪರಿಹರಿಸಲು ಸಾಧ್ಯವಿಲ್ಲ. ಜನಸಂಚಾರದಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ಜನರು ಅಲ್ಲಲ್ಲಿಯೇ ತಾತ್ಕಾಲಿಕವಾಗಿ ನೆಲೆಗೊಳ್ಳಲಿ ಎಂಬುದು ಲಾಕ್‍ಡೌನ್‍ನ ಮೂಲ ಆಶಯ.
ಲಾಕ್‍ಡೌನ್ ಜಾರಿಯಾಗುತ್ತದೆಯೋ ಇಲ್ಲವೋ, ಆದರೆ ಊಹಾಪೋಹದ ಮಾತುಗಳೇ ಜನರಲ್ಲಿ ಅನಗತ್ಯ ಆತಂಕ ಹುಟ್ಟಿಸುತ್ತಿವೆ. ಮಿಗಿಲಾಗಿ ವ್ಯಾಪಾರ ವಹಿವಾಟುಗಳ ಮೇಲೆ ಪರಿಣಾಮವನ್ನೂ ಬೀರಲಾರಂಭಿಸಿವೆ. ಕಾರ್ಮಿಕರು ಹಿಂದಿನ ಕಹಿ ಅನುಭವದ ಕಾರಣ ತಮ್ಮ ಊರುಗಳತ್ತ ತೆರಳಲಾ ರಂಭಿಸಿದ್ದಾರೆ. ಕಳೆದ ವರ್ಷ ಊರಿಗೆ ತೆರಳಿದ್ದ ಎಷ್ಟೋ ಕಾರ್ಮಿಕರು ವಾಪಸ್ ಬಂದೇ ಇಲ್ಲ. ಯಾವುದೇ ಉದ್ಯಮಿಯನ್ನು ಮಾತನಾಡಿಸಿದರೂ ಕಾರ್ಮಿಕರದ್ದೇ ದೊಡ್ಡ ಸಮಸ್ಯೆ ಎಂದು ಹೇಳುತ್ತಾರೆ. ಮಾರುಕಟ್ಟೆ ಇದೀಗ ಅಲ್ಪಸ್ವಲ್ಪ ಚೇತರಿಕೆ ಕಾಣುತ್ತಿರುವ ಸಮಯದಲ್ಲಿ ಮತ್ತೆ ಲಾಕ್‍ಡೌನ್‍ನ ಪ್ರಸ್ತಾಪ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಉದ್ದಿಮೆದಾರರನ್ನೂ ಆತಂಕಕ್ಕೀಡು ಮಾಡಿದೆ.
ಕಳೆದ ವಾರ ವ್ಯಾಪಾರಿ ಸ್ನೇಹಿತನೊಬ್ಬನ ಜತೆ ಮಾತನಾಡುತ್ತಿದ್ದಾಗ ಆತ 'ಅಗತ್ಯ ಸರಕು-ಸಾಮಗ್ರಿಗಳು ಸಮಯಕ್ಕೆ ಸರಿಯಾಗಿ ಎಲ್ಲಿಯೂ ಲಭಿಸುತ್ತಿಲ್ಲ. ಲಭಿಸಿದರೂ ಉತ್ಪಾದನಾ ಮಟ್ಟ, ಪ್ರಮಾಣ ಕಡಿಮೆ ಇರುವ ಕಾರಣ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಉದ್ಯಮಗಳು ಸರಿದಾರಿಗೆ ಬರಬೇಕೆಂದರೆ ಕನಿಷ್ಠ ಎರಡು ವರ್ಷಗಳಾದರೂ ಬೇಕಿತ್ತು. ಆದರೆ ಇದೀಗ ಕೊರೊನಾ ಎರಡನೇ ಅಲೆ ವ್ಯಾಪಾರೋದ್ದಿಮೆಗಳನ್ನು ಮತ್ತೆ ನಲುಗಿಸುತ್ತಿದೆ' ಎಂದು ಹೇಳಿದ.
ಎರಡನೇ ಅಲೆ ಅಂದಾಜಿಸಿದ ಸಮಯದಲ್ಲಿ ಯಾವಾಗ ಜೀವ ಹಿಂಡಲಿಲ್ಲವೋ ಅದು ಜನರಲ್ಲಿ ಭ್ರಮಾತ್ಮಕ ಉತ್ಸಾಹವನ್ನು ಹುಟ್ಟುಹಾಕಿತು. ಹಳ್ಳಿಪಟ್ಟಣಗಳಲ್ಲಿ ಯಥಾಪ್ರಕಾರ ಮಾರಿಹಬ್ಬ ಆಚರಿ ಸಲಾಯಿತು. ಮದುವೆ ಮುಂಜಿಗಳ ಅಬ್ಬರ ಶುರು ವಾಯಿತು. ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಂತೆ ಸಮಾವೇಶಗಳನ್ನು ಏರ್ಪಡಿಸಿದವು. ಚುನಾವಣೆ ಗಳು, ರಾಜಕೀಯ ಸಭೆಗಳು ನಿರಾತಂಕವಾಗಿ ನಡೆದವು. ಯಾವ ರಾಜಕೀಯ ನೇತಾರರಿಗೂ ಸಮಾವೇಶಗಳಿಂದ ದೂರವುಳಿಯಲು ಕೊರೊನಾ ವೈರಾಣು ಒಂದು ಕಾರಣವೇ ಆಗಲಿಲ್ಲ.
ಇವೆಲ್ಲದರ ಪರಿಣಾಮವಾಗಿ, ಕೊರೊನಾ ಮತ್ತೆ ದಾಂಗುಡಿ ಇಟ್ಟಿದೆ. ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದರೂ ಎಲ್ಲರಿಗೂ ದೊರಕಿಸಿಕೊಡಲು ಇನ್ನೂ ಬಹುದೂರ ಕ್ರಮಿಸಬೇಕಾಗಿದೆ. ಕೆಲವರು ಆರೋಗ್ಯಕ್ಕಾಗಿ ಮಾಸ್ಕ್ ಧರಿಸಬಯಸದೆ, ದಂಡ ತೆರಬೇಕಲ್ಲ ಎಂಬ ಭಯಕ್ಕೆ ಬೇಕಾಬಿಟ್ಟಿ ಧರಿಸುತ್ತಿ
ದ್ದಾರೆ. ಬೀದಿಬದಿ ಅಂಗಡಿಗಳ ವ್ಯಾಪಾರ ಶೈಲಿ ಯಥಾವತ್ ಇದೆ. ಕೊರೊನಾ ಕಾರಣವಾಗಿ ಮಾರ್ಗಸೂಚಿ ಪಾಲನೆ, ಆರೋಗ್ಯಕರ ವಾತಾವರಣದ ಪಾಲನೆ ಎಲ್ಲಿಯೂ ಕಂಡು ಬರುತ್ತಿಲ್ಲ. ಹೀಗಾದರೆ ನಾವು ಕೊರೊನಾವನ್ನು ಹೇಗೆ ಹಿಮ್ಮೆಟ್ಟಿಸಲು ಸಾಧ್ಯ?
ಕೊರೊನಾದಿಂದ ಸಾವಿಗೀಡಾದವರ, ಸೋಂಕಿಗೀಡಾದವರ ಮನೆಯವರ ಅನುಭವಗಳನ್ನು ಆಲಿಸಬೇಕು. ಅದರ ಭಯಾನಕತೆ, ಆರ್ಥಿಕ ಮುಗ್ಗಟ್ಟು, ಆತಂಕ, ಕೆಲವು ಆಸ್ಪತ್ರೆಗಳಲ್ಲಿನ ಸುಲಿಗೆ, ಆಮ್ಲಜನಕಕ್ಕಾಗಿ ಪರದಾಟ, ಬೆಡ್‍ಗಾಗಿ ಪರಿತಪಿಸಿದ ಪರಿಗಳ ವಿವರ ಅರಿತರೆ ಇತರರು ನಿಶ್ಚಿತವಾಗಿಯೂ ಜಾಗರೂಕರಾಗುತ್ತಾರೆ.
ಈಗಲೂ ಕಾಲ ಮಿಂಚಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಬದಲು, ಬದುಕಿನ ಗಳಿಕೆಯು ಆಸ್ಪತ್ರೆಯ ಖರ್ಚುವೆಚ್ಚಗಳಿಗೆ ವಿನಿಯೋಗವಾಗುವ ಬದಲು, ಸಮಾಜದ ಕಣ್ಣಲ್ಲಿ ಬೇಡದವರಂತೆ ಪರಿಗಣಿತವಾಗಿ ಹಿಂಸೆಗೆ ಒಳಗಾಗುವ ಬದಲು ಕೆಲವೇ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಮೊದಲು ನಾವು ಸ್ವಸ್ಥರಾಗಿ ಇರಬಹುದು, ತನ್ಮೂಲಕ ಸಮುದಾಯವನ್ನೂ ಸ್ವಸ್ಥವಾಗಿ ಇಡಬಹುದು.
ಮುಂದಿನ ಕೆಲವು ದಿನಗಳ ಕಾಲ ಮನೆ ಯಿಂದ ಅನಗತ್ಯವಾಗಿ ಹೊರಬರದೆ ಗೃಹವಾಸ್ತವ್ಯವನ್ನೇ ಮಾಡೋಣ. ಅಧಿಕ ಜನ ಸೇರುವ ಸಭೆ ಸಮಾರಂಭಗಳಲ್ಲಿ ಭಾಗಿಯಾಗದಿರೋಣ. ಅಗತ್ಯ ಸಾಮಗ್ರಿಗಳನ್ನು ವಾರಕ್ಕೆ ಒಮ್ಮೆ ಖರೀದಿಸಿ ಇಟ್ಟು ಕೊಳ್ಳೋಣ. ಬಂಧುಬಳಗ-ಮಿತ್ರರ ಕೂಟಗಳನ್ನು ಮೊಬೈಲ್‍ನಲ್ಲಿಯೇ ನಿಭಾಯಿಸೋಣ. ವೈಯಕ್ತಿಕ ಶುಚಿತ್ವ ಎಷ್ಟು ಮಹತ್ವವೋ ಸಾಮುದಾಯಿಕ ಸ್ವಚ್ಛತೆಯೂ ಅಷ್ಟೇ ಮುಖ್ಯ. ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮುಖಗವಸು ಧರಿಸುವುದನ್ನು ಮರೆಯದಿರೋಣ.
ಕೊರೊನಾವೋ ಮತ್ತಾವುದೋ ಕಾರಣದಿಂದ ನಾವು ಸಾಯಬಹುದು. ಆದರೆ ನಮ್ಮ ನಿರ್ಗಮನವು ನಮ್ಮನ್ನು ಅವಲಂಬಿಸಿದವರ ಮೇಲೆ ಉಂಟು ಮಾಡುವ ಆಘಾತ, ಅನನುಕೂಲಗಳನ್ನು ನೆನಪಿಸಿಕೊಳ್ಳೋಣ. ನಮ್ಮವರನ್ನು ಪ್ರೀತಿಸುವ ನಾವು, ನಮ್ಮವರಿಗಾಗಿಯೇ ಸ್ವಲ್ಪ ಕಾಳಜಿ ವಹಿಸಿದರೆ ನಾವೂ ಸುಖಿಗಳು, ಅನ್ಯರೂ ಸುಖಿಗಳು. ಸಾತ್ವಿಕ ಚಿಂತನೆಗಳು- ಸಮಷ್ಟಿ ಪ್ರಜ್ಞೆಯಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.