ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತಪಾಸಣೆ ಹೆಚ್ಚಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್ ಹೇಳಿರುವರು. ಮುಂದಿನ ಎರಡು ದಿನಗಳಲ್ಲಿ 2.5 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪರೀಕ್ಷೆಯನ್ನು ಹೆಚ್ಚಿಸಲಾಗುವುದು. ರಾಜ್ಯದಲ್ಲಿ ಕೋವಿಡ್ ಲಸಿಕೆಯ ದಾಸ್ತಾನು ಕೇವಲ 7 ಲಕ್ಷ ಪ್ರಮಾಣದಲ್ಲಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಜನರು ಸ್ವಯಂ ನಿಯಂತ್ರಣ ಮತ್ತು ಪ್ರತಿರೋಧವನ್ನು ಖಚಿತಪಡಿಸಿಕೊಳ್ಳಬೇಕು. ಪ್ರಾಮುಖ್ಯತೆ ಇಲ್ಲದ ಸಮಾರಂಭಗಳಿಗೆ ತೆರಳಬಾರದು ಮತ್ತು ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ಮುಂದಾಗಬೇಕೆಂದು ಅವರು ಕರೆ ನೀಡಿರುವರು.
ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಮಾತ್ರ ಬೋಧನಾ ತರಗತಿಗಳನ್ನು ನಡೆಸಬೇಕು. ಹೋಟೆಲ್ ಗಳಲ್ಲಿ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು. ಲಸಿಕೆ ಪೂರೈಕೆ ಸಾಕಷ್ಟು ಆಗುತ್ತಿರುವಂತೆ ಹೆಚ್ಚಿನ ಜನರಿಗೆ ಲಭ್ಯವಾಗಲಿದೆ. ಸಾರ್ವಜನಿಕ ಸಮಾರಂಭಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದವರು ಮಾಹಿತಿ ನೀಡಿದರು.
ತ್ರಿಶೂರ್ ಪೂರಂನಲ್ಲಿ ಭಾಗವಹಿಸುವವರಿಗೆ ಪಾಸ್ ಕಡ್ಡಾಯವಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದರು. ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರುವವರು ಪಾಸ್ ಪಡೆಯುತ್ತಾರೆ. ಲಸಿಕೆ ಹಾಕಿದ ಜನರು ಸಹ ಉತ್ಸವದಲ್ಲಿ ಭಾಗವಹಿಸಬಹುದು ಎಂದರು.
ರಾಜ್ಯದಲ್ಲಿ ಲಾಕ್‍ಡೌನ್ ಹೇರುವ ಪ್ರಮೇಯತೆ ಈಗಿಲ್ಲ. ಎರಡು ವಾರಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ. ಮನೆ-ಮನೆಗಳಿಗೆ ಸಾಮಗ್ರಿಗಳ ವಿತರಣೆ ವಿಸ್ತರಿಸಲು ವ್ಯಾಪಾರಸ್ಥರು ಪ್ರಯತ್ನಿಸಬೇಕು. ಚಿತ್ರಮಂದಿರಗಳು ಮತ್ತು ಬಾರ್ ಗಳು ರಾತ್ರಿ ಒಂಬತ್ತು ಗಂಟೆಗೆ ಮುಚ್ಚಬೇಕು ಎಂದವರು ವಿವರ ನೀಡಿದರು.