ಸಾಲ್ಟ್ ಲೇಕ್ /ಬರ್ಧವಾನ್/ಸಿಲಿಗುರಿ: ಕೆಲವು ಮತಗಟ್ಟೆಗಳ ಹೊರಗೆ ಟಿಎಂಸಿ, ಬಿಜೆಪಿ, ಸಿಪಿಎಂ ಬೆಂಬಲಿಗರ ನಡುವೆ ಘರ್ಷಣೆ , ಬೂತ್ ಏಜೆಂಟರ ಅಪಹರಣ ಮತ್ತು ಮತದಾರರನ್ನು ಮತಗಟ್ಟೆಗೆ ಹೋಗದಂತೆ ತಡೆಯುತ್ತಿದ್ದಾರೆಂಬ ಆರೋಪ-ಪ್ರತ್ಯಾರೋಪ..
ಇವು ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಕಂಡು ಬಂದ ಕೆಲವು ಅಹಿತಕರ ಘಟನೆಗಳು. ಚುನಾವಣೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಇಂಥ ಘಟನೆಗಳು ನಡೆದಿದ್ದು, ತಕ್ಷಣದಲ್ಲೇ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.
ಪಶ್ಚಿಮ ಬಂಗಾಳದ ದಕ್ಷಿಣ ಭಾಗದ ಜಿಲ್ಲೆಗಳಾದ ಉತ್ತರ 24 ಪರಗಣ, ಪುರ್ಬಾ ವರ್ಧಮಾನ್ ಮತ್ತು ನಾಡಿಯಾ ಹಾಗೂ ಉತ್ತರ ಭಾಗದ ಜಿಲ್ಲೆಗಳಾದ ಜಲಪೈಗುರಿ, ಡಾರ್ಜಿಲಿಂಗ್ ಮತ್ತು ಕಾಲಿಪಾಂಗ್ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ 45 ಸ್ಥಾನಗಳಿಗೆ ಐದನೇ ಹಂತದ ಮತದಾನ ನಡೆಯುತ್ತಿದೆ.
ಬಿಧಾನಗರದ ಶಾಂತಿನಗರ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಮತದಾರರನ್ನು ಮತಗಟ್ಟೆ ಬಳಿ ಬರದಂತೆ ತಡೆಯುವ ಪ್ರಯತ್ನಗಳು ನಡೆದವು. ಈ ವೇಳೆ ಎರಡೂ ಪಕ್ಷಗಳ ಬೆಂಬಲಿಗರು ಕಲ್ಲು ಮತ್ತು ಇಟ್ಟಿಗೆಗಳಿಂದ ಹೊಡೆದಾಡಿದರು. ಘಟನಾ ಸ್ಥಳಕ್ಕೆ ಧಾವಿಸಿದ ಕೇಂದ್ರೀಯ ಪಡೆಯ ಯೋಧರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು ಎಂದು ಚುನಾವಣಾ ಆಯೋಗದ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಎಂಸಿ ಶಾಸಕ ಸುಜಿತ್ ಬೋಸ್ ಮತ್ತು ಬಿಜೆಪಿ ಅಭ್ಯರ್ಥಿ ಸವ್ಯಸಾಚಿ ದತ್ತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದರು. ಇದಾದ ನಂತರ ಸಿಲಿಗುರಿ ಕ್ಷೇತ್ರದ ಮತಗಟ್ಟೆಯೊಂದರ ಬಳಿ ಟಿಎಂಸಿ ಮತ್ತು ಸಿಪಿಐ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. 'ನಾಡಿಯಾ ಜಿಲ್ಲೆಯ ಶಾಂತಿಪುರದಲ್ಲಿ ಭದ್ರತಾ ಪಡೆಗಳು ಮತದಾರರನ್ನು ಮತ ಕೇಂದ್ರದಿಂದ ಹಿಂದಕ್ಕೆ ಕಳಿಸುತ್ತಿದ್ದಾರೆ' ಎಂದು ಟಿಎಂಸಿ ಆರೋಪಿಸಿತು. ಈ ಆರೋಪವನ್ನು ಅಧಿಕಾರಿಗಳು ತಳ್ಳಿ ಹಾಕಿದರು.
'ಬರ್ಧಮನ್ ಕ್ಷೇತ್ರದ ಉತ್ತರ ಭಾಗದಲ್ಲಿರುವ ಮತಗಟ್ಟೆಯೊಂದನ್ನು ಬಿಜೆಪಿ ವಶಪಡಿಸಿಕೊಂಡಿದೆ' ಎಂದು ಟಿಎಂಸಿ ಆರೋಪಿಸಿದೆ. ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ. 'ಇಂಥ ಯಾವುದೇ ಘಟನೆ ನಡೆದಿಲ್ಲ' ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಉತ್ತರ 24 ಪರಗಣಗಳ ಜಿಲ್ಲೆಯ ಬಿಜಾಪುರದಲ್ಲಿ ಮತದಾರರನ್ನು ಮತಗಟ್ಟೆ ಹೋಗದಂತೆ ತಡೆಯಲಾಗುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ. ಪರಸ್ಪರ ಆರೋಪ- ಪ್ರತ್ಯೋರೋಪದ ನಂತರ ಎರಡು ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು.
'ಮಿನಾಖಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಬೂತ್ ಏಜೆಂಟರನ್ನು ಟಿಎಂಸಿ ಅಪಹರಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಪಕ್ಷದವರು, 'ಮತಗಟ್ಟೆಗಳಿಗೆ ಏಜೆಂಟರನ್ನು ನಿಯೋಜಿಸುವಷ್ಟು ಶಕ್ತಿ ಇಲ್ಲದ ಬಿಜೆಪಿಯವರು ಹೀಗೆ ಆಧಾರವಿಲ್ಲದೇ ಆರೋಪ ಮಾಡುತ್ತಿದ್ದಾರೆ' ಎಂದು ದೂರಿದ್ದಾರೆ.