ನವದೆಹಲಿ: ಕೇರಳದ ವಾಳಯಾರ್‌ನಲ್ಲಿ 2017ರಲ್ಲಿ ನಡೆದಿದ್ದ ಇಬ್ಬರು ಸೋದರಿಯರ ನಿಗೂಢ ಸಾವು ಮತ್ತು ಲೈಂಗಿಕ ದೌರ್ಜನ್ಯದ ಶಂಕೆ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು, ಎರಡು ಎಫ್‌ಐಆರ್ ದಾಖಲಿಸಿದೆ.
ತಡ ಮಾಡದೇ ತನಿಖೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ನಿರ್ದೇಶನದ ಹಿಂದೆಯೇ, ಕಾರ್ಯಪ್ರವೃತ್ತವಾಗಿರುವ ಸಿಬಿಐ, ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ.
ಜನವರಿ 13, 2017ರಂದು 13 ವರ್ಷದ ಬಾಲಕಿಯ ಶವ ಗುಡಿಸಿಲಿನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಾರ್ಚ್ 4ರಂದು ಆಕೆಯ ತಂಗಿ ಶಂಕಾಸ್ಪದವಾಗಿ ಮೃತಪಟ್ಟಿದ್ದರು.
' ಈ ಇಬ್ಬರೂ ಬಾಲಕಿಯರ ಮೇಲೆ ಐವರು ಅಸಹಜವಾಗಿ ಒಂದು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಡ ಹೇರಲಾಗಿತ್ತು' ಎಂದು ತನಿಖೆ ನಡೆಸಿದ್ದ ವಲಯಾರ್ ಪೊಲೀಸರು ತಿಳಿಸಿದ್ದರು.
ಸಾಕ್ಷ್ಯದ ಕೊರತೆ ಕಾರಣ ಪಾಲಕ್ಕಾಡ್‌ನ ವಿಶೇಷ ಪೋಕ್ಸೊ ನ್ಯಾಯಾಲಯ ಐವರನ್ನು ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಾಲಕಿಯರ ತಾಯಿ ಸಲ್ಲಿಸಿದ್ದ ಮನವಿ ಪುರಸ್ಕರಿಸಿದ ಕೇರಳ ಹೈಕೋರ್ಟ್ ಕಳೆದ ಜನವರಿಯಲ್ಲಿ ಮರು ತನಿಖೆಗೆ ಆದೇಶಿಸಿತ್ತು. ಸರ್ಕಾರದ ಅಭಿಪ್ರಾಯ ಆಧರಿಸಿ ಮಾರ್ಚ್ 19ರಂದು ತನಿಖೆ ಕೈಗೊಳ್ಳಲು ಸಿಬಿಐಗೆ ನಿರ್ದೇಶನ ನೀಡಿತ್ತು.