ನವದೆಹಲಿ: ಕೊರೋನಾ ಪ್ರಸರಣ, ತಡೆಗಟ್ಟುವ ಅಂಶಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ರೀತಿಯ ಪ್ರಚಾರ ನಡೆಯುತ್ತಿವೆ. ಆ ಪೈಕಿ ಕೆಲ ಮಾಹಿತಿಗಳ ಕುರಿತು ಜನರಲ್ಲಿ ಜಾಗೃತಿ ಇದ್ದರೂ.. ಇನ್ನೂ ಹಲವಾರು ಅಂಶಗಳ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಿವೆ.
ನೀರು, ಸೊಳ್ಳೆ, ನೊಣಗಳ ಮೂಲಕ ಕೊರೋನಾ ಸೋಂಕು ಹರಡುವ ಸಾಧ್ಯತೆ ಇಲ್ಲ. ಆದರೆ, ಅವುಗಳ ಮೂಲಕ ಸೋಂಕು ಹರಡಲಿದೆ ಎಂಬ ಸುಳ್ಳು ಪ್ರಚಾರ ನಡೆಯುತ್ತಿವೆ. ಕೆಲವರು ಗೊತ್ತೋ.. ಗೊತ್ತಿಲ್ಲದೆಯೋ ಅವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿತ್ಯ ಜೀವನಕ್ಕೆ ಸಂಬಂಧಿಸಿರುವ ಈ ಅಂಶಗಳ ಬಗೆಗಿನ ವದಂತಿಗಳು ಜನರಲ್ಲಿ ಗೊಂದಲ ಹಾಗೂ ಭಯ ಹುಟ್ಟಿಸುತ್ತವೆ. ಇಂತಹ ಪ್ರಚಾರದಲ್ಲಿ ವಾಸ್ತವವೆಷ್ಟು? ಯಾವುದು ಸರಿ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಓ) ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳೊಣ.
ಪ್ರಶ್ನೆ: ವ್ಯಾಯಾಮ ಮಾಡುವಾಗಲೂ ಮಾಸ್ಕ್ ಧರಿಸುವುದು ಅಗತ್ಯವೇ?
WHO: ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸುವುದರಿಂದ ಸರಾಗವಾಗಿ ಉಸಿರಾಡುವುದನ್ನು ತಡೆಯಬಹುದು. ಆ ಸಮಯದಲ್ಲಿ ದೇಹದಿಂದ ಹೊರಬರುವ ಬೆವರು ಮಾಸ್ಕಕ್ ತೇವಗೊಳಿಸಿ ಉಸಿರಾಟದ ಪ್ರಕ್ರಿಯೆಯನ್ನ ಸಂಕೀರ್ಣಗೊಳಿಸಿ, ರೋಗಾಣುಗಳು ಬೆಳೆಯಲು ಕಾರಣವಾಗುತ್ತವೆ. ವ್ಯಾಯಾಮದ ಸಮಯದಲ್ಲಿ
ಮಾಸ್ಕ್ ತೆಗೆದುಹಾಕಿ ಕನಿಷ್ಠ ಒಂದು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ.
ಈಜುವುದರಿಂದ ಕೊರೋನಾ ಬರುತ್ತದೆಯೇ?
ಈಜುವ ಸಮಯದಲ್ಲಿ ನೀರಿನ ಮೂಲಕ ಕೊರೋನಾ ವೈರಸ್ ಹರಡುವುದಿಲ್ಲ. ಕೇವಲ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾಗ ಮಾತ್ರ ವೈರಸ್ ಹರಡುತ್ತದೆ.
ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ಪ್ರಯೋಜನವಿದೆಯೇ?
ಬಿಸಿ ನೀರಿನ ಸ್ನಾನ ಮಾಡುವುದರಿಂದ ಮಾತ್ರ ಕೋವಿಡ್ ವೈರಸ್ ಬರುವುದಿಲ್ಲ ಎಂಬುದು ಸರಿಯಲ್ಲ. ತುಂಬಾ ಬಿಸಿ ನೀರು ಸ್ನಾನ ಮಾಡುವುದು ಸೂಕ್ತವಲ್ಲ.
ಕೊರೋನಾ ವೈರಸ್ ಸೊಳ್ಳೆ ಹಾಗೂ ನೊಣಗಳಿಂದ ಹರಡುತ್ತದೆಯೇ?
ಕೊರೋನಾ ವೈರಸ್ ಸೊಳ್ಳೆಗಳು ಅಥವಾ ನೊಣಗಳಿಂದ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೋಂಕಿತ ವ್ಯಕ್ತಿ ಸೀನುವಾಗ, ಕೆಮ್ಮುವಾಗ ಅಥವಾ ಮಾತನಾಡುವಾಗ ಮಾತ್ರ ವೈರಸ್ ತಂತುಗಳ ಮೂಲಕ ಇತರರ ದೇಹವನ್ನು ಪ್ರವೇಶಿಸಬಹುದು.