ಮಂಗಳೂರು; ಪಬ್ ಜಿ ಆಡಲು ಮನೆಯಿಂದ ಹೊರ ಹೋಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಾಲಕನ ಜೊತೆ ಆಟವಾಡುತ್ತಿದ್ದ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
12 ವರ್ಷದ ಬಾಲಕ ಹಕೀಫ್ ಶವ ಭಾನುವಾರ ಮುಂಜಾನೆ ಉಳ್ಳಾಲದ ಕೆ. ಸಿ. ರೋಡ್‌ನ ಮೈದಾನದವೊಂದರ ಮೂಲೆಯಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಆಟವಾಡಲು ಹೋಗುತ್ತೇನೆ ಎಂದು ಹಕೀಫ್ ಮನೆಯಿಂದ ಹೊರ ಹೋಗಿದ್ದ.
ಬಾಲಕನ ಶವದ ಮೇಲೆ ಗಾಯದ ಗುರುತು ಇದೆ. ಕಲ್ಲಿನಿಂದ ಜಜ್ಜಿದ ಗಾಯವಿದೆ. ಶವವನ್ನು ಎಲೆಯಿಂದ ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಟವಾಡಲು ಹೋದ ಬಾಲಕ ತಡರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಪೋಷಕರು ಪೊಲೀಸ್ ಠಾಣೆಗೆ ನಾಪತ್ತೆ ದೂರು ಸಲ್ಲಿಕೆ ಮಾಡಿದ್ದರು. ಹಕೀಫ್ ಜೊತೆ ಆಟವಾಡುತ್ತಿದ್ದ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹಕೀಫ್‌ಗೆ ಪಬ್ ಜಿ ಸೇರಿದಂತೆ ವಿಡಿಯೋ ಗೇಮ್ ಆಡುವುದು ಬಹಳ ಇಷ್ಟವಾಗಿತ್ತು. ಗೆಳೆಯರ ಜೊತೆ ಸೇರಿ ಆನ್‌ಲೈನ್‌ನಲ್ಲಿಯೇ ವಿಡಿಯೋ ಗೇಮ್ ಆಡುತ್ತಿದ್ದ. ಯಾವಾಗಲೂ ನೀನು ಗೆಲ್ಲುತ್ತೀಯಾ, ನಿನ್ನ ಆಟ ಬೇರೆಯವರು ಆಡುತ್ತಾರೆ ಎಂದು ಸ್ನೇಹಿತರ ಜೊತೆ ಜಗಳವೂ ನಡೆದಿತ್ತು.
ಶನಿವಾರ ನಮ್ಮ ಜೊತೆಗೆ ಬಂದು ಆಟವಾಡಬೇಕು ಎಂದು ಹಕೀಫ್ ಕರೆಸಲಾಗಿತ್ತು ಎಂಬ ಮಾಹಿತಿ ಇದೆ. ಆದರೆ, ಕೊಲೆ ಮಾಡಿದವರು ಯಾರು? ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಬೇಕಿದೆ.