ನೀರಿನ ಕೊರತೆ, ವಿದ್ಯುತ್ ಕೊರತೆ, ಸಂಚಾರ ಸೌಲಭ್ಯ ಕೊರತೆಯಂಥ ಕಷ್ಟಗಳನ್ನು ಕಾಲಕಾಲಕ್ಕೆ ಹೇಗೋ ನೀಗಿಕೊಂಡು ಪುಟಿದೇಳುತ್ತ ಬಂದ ಭಾರತಕ್ಕೆ ಈಗ ಆಮ್ಲಜನಕದ್ದೇ ಕೊರತೆಯನ್ನು ಕೊರೊನಾ ಮಹಾಮಾರಿ ತಂದೊಡ್ಡಿದೆ. ಆಸ್ಪತ್ರೆಗಳಿಗೆ, ಗೃಹಶುಶ್ರೂಷೆಯಲ್ಲಿರುವವರಿಗೆ ತುರ್ತಾಗಿ ಬೇಕೇಬೇಕಿದ್ದ ಆಮ್ಲಜನಕ ಸಿಗುತ್ತಿಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳತ್ತ ಬೊಟ್ಟು ಮಾಡಬೇಕೆ ವಿನಾ ಮಹಾಮಾರಿಯನ್ನು ದೂಷಿಸಿ ಪ್ರಯೋಜನವಿಲ್ಲ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಈಗೇನೋ 'ತುರ್ತಾಗಿ ಆಮ್ಲಜನಕದ ಉತ್ಪಾದನೆಗೆ ಮತ್ತು ಆಮದಿಗೆ ಕ್ರಮ ಕೈಗೊಳ್ಳುತ್ತೇವೆ; ರೈಲುಗಳ ಮೂಲಕ ಆಮ್ಲಜನಕದ ಟ್ಯಾಂಕರ್‌ಗಳನ್ನು ಒದಗಿಸುವ ವ್ಯವಸ್ಥೆ
ಮಾಡುತ್ತೇವೆ; ಕಬ್ಬಿಣ, ಉಕ್ಕು ಮತ್ತಿತರ ಔದ್ಯಮಿಕ ಉತ್ಪಾದನೆಗಳಿಗೆ ಬೇಕಿದ್ದ ಆಮ್ಲಜನಕವನ್ನೂ ಆಸ್ಪತ್ರೆಗಳತ್ತ ತಿರುಗಿಸು ತ್ತೇವೆ; ದ್ರವರೂಪದ ಸಾರಜನಕ ಮತ್ತು ಆರ್ಗೊನ್ ಅನಿಲಗಳನ್ನು ಸಾಗಿಸುತ್ತಿದ್ದ ಟ್ಯಾಂಕರುಗಳಲ್ಲಿ ಆಮ್ಲಜನಕವನ್ನು ಸಾಗಿಸುತ್ತೇವೆ' ಎಂದೆಲ್ಲ ಸರ್ಕಾರಿ ವಕ್ತಾರರು ಹೇಳುತ್ತಿದ್ದಾರೆ. ಇವೆಲ್ಲ ಕ್ರಮಗಳೂ ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡುವಂತಹ ತರಾತುರಿಯ ಕ್ರಮಗಳಂತೆ ಕಾಣುತ್ತವೆ. ಕೇಂದ್ರ ಆರೋಗ್ಯ ಸಚಿವರೇನೊ 162 ಹೊಸ ಘಟಕಗಳನ್ನು ವಿವಿಧ ರಾಜ್ಯಗಳಿಗೆ 'ಸ್ಯಾಂಕ್ಷನ್' ಮಾಡಲಾಗಿದೆ ಎಂದೂ ಅವುಗಳಲ್ಲಿ 33 ಘಟಕಗಳು ಈಗಲೇ ಕೆಲಸ ಆರಂಭಿಸುತ್ತವೆಂದೂ ಹೇಳಿದ್ದಾರೆ. ಈ ದಿಢೀರ್ ನಿರ್ಧಾರಗಳೆಲ್ಲ ಸರ್ಕಾರದ ಶ್ಲಾಘನೀಯ ಕ್ರಮಗಳೆಂದು ಮೇಲ್ನೋಟಕ್ಕೆ ಕಾಣುತ್ತವಾದರೂ ಅನುಮತಿಗಾಗಿ ಕಾಯುತ್ತ ಕೂತಿದ್ದ ಕಡತಗಳಿಗೆ ಇದೀಗ ತುರ್ತು ಬಿಡುಗಡೆ ಸಿಕ್ಕಿತು ಎಂಬುದೇ ನಿಜವಾದ ಅರ್ಥವಾಗಿದೆ. ಏಕೆಂದರೆ, ಆಮ್ಲಜನಕ ಘಟಕಗಳೆಂದರೆ ಎಲ್ಲೆಂದರಲ್ಲಿ ಹೊತ್ತೊಯ್ದು ಹೂಡಬಹುದಾದ ಯಂತ್ರಗಳೇನಲ್ಲ. ಅವಕ್ಕೆ ದೊಡ್ಡ ಪ್ರಮಾಣದ ವಿದ್ಯುತ್ ಬೇಕು; ಗಾಳಿಯನ್ನು ಕಡುತಂಪು ಮಾಡುವ ಕ್ರಯೊಜೆನಿಕ್ ವ್ಯವಸ್ಥೆ ಬೇಕು; ಆಮ್ಲಜನಕದ ದ್ರವವನ್ನು ಸಾಗಿಸಬಲ್ಲ ಹೊಸ ಕ್ರಯೊಟ್ಯಾಂಕರ್‌ಗಳ ಸಾಲು ಸಜ್ಜಾಗಿರಬೇಕು; ಸಾಗಿಸಿದ್ದನ್ನು ತುಂಬಲು ಸಾಲುಸಾಲು ಖಾಲಿ ಸಿಲಿಂಡರುಗಳು ಬೇಕು.
ಕೋವಿಡ್ ಪರೀಕ್ಷಾ ಸೌಕರ್ಯಗಳ ಅಭಾವ, ಪಿಪಿಇ ಕಿಟ್‌ಗಳ ಅಭಾವ, ಆಂಬುಲೆನ್ಸ್ ಅಭಾವ, ಆಸ್ಪತ್ರೆಗಳ ಅಭಾವ, ಹಾಸಿಗೆಗಳ ಅಭಾವ, ವೆಂಟಿ ಲೇಟರ್ಸ್ ಅಭಾವ, ರೆಮ್‌ಡಿಸಿವಿರ್ ಔಷಧದ ಅಭಾವ, ಸ್ಮಶಾನದಲ್ಲಿ ಸ್ಥಳಾಭಾವ, ವ್ಯವಸ್ಥೆ ಯಲ್ಲಿ ಹೊಂದಾಣಿಕೆ ಅಭಾವ ಇತ್ಯಾದಿಗಳೆಲ್ಲ ಮಹಾಮಾರಿಯ ಮೊದಲ ದಾಳಿಯಲ್ಲಿ ಅನಿರೀಕ್ಷಿತ ವೆಂದು ಕೆಲಮಟ್ಟಿಗೆ ಹೇಳಬಹುದಿತ್ತು (ಇಂದಿನ ಮಾಹಿತಿ ಯುಗದಲ್ಲಿ ಅದೂ ಅನಿರೀಕ್ಷಿತವೇ ನಲ್ಲ; ಬರಲಿರುವ ಮಹಾಮಾರಿಯನ್ನು ತಡೆಯಲು ಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಿಂಗಳು ಮೊದಲೇ ತಿಳಿಸಿತ್ತು).
ತಡವಾಗಿಯಾದರೂ ಅವುಗಳಿಗೆಲ್ಲ ವ್ಯವಸ್ಥೆ ಮಾಡಿದ್ದೇನೊ ಸರಿ. ಆದರೆ ಮಾರಿಯ ಅಬ್ಬರ ತುಸು ತಗ್ಗಿತೆಂದು ವಿರಮಿಸಿದ್ದು, ಔಷಧ-ಲಸಿಕೆಗಳ ರಫ್ತಿಗೆ ಒಪ್ಪಿಗೆ ಕೊಟ್ಟಿದ್ದು, ಇತ್ತ ಉತ್ಪಾದನೆ ಹೆಚ್ಚಿಸುವತ್ತ ಲಕ್ಷ್ಯ ಕೊಡದೆ, ಹಳಿ ಹತ್ತಿದ ವ್ಯವಸ್ಥೆಯನ್ನು ಮತ್ತೆ ಕಡೆಗಣಿಸಿದ್ದು ಸರಿಯಲ್ಲ. ಎರಡನೇ ಅಲೆ ಆರಂಭವಾಗಿದ್ದರ ಬಗ್ಗೆ ವಿದೇಶಗಳಿಂದ ಸುದ್ದಿ ಬರುತ್ತಿದ್ದಾಗ, ನಮ್ಮಲ್ಲೂ ಕಾಯಿಲೆ ಬೀಳುತ್ತಿದ್ದವರ ಸಂಖ್ಯೆ ಮತ್ತೆ ಏರುತ್ತಿದೆ ಎಂಬುದು ಗೊತ್ತಾಗುತ್ತಿದ್ದಾಗ ಲಗಾಮು ಸಡಿಲವಾಯಿತು. ಕಳೆದ ವರ್ಷ 'ಗೋ ಕೊರೊನಾ ಗೋ' ಎಂದು ಭಜನೆ ಹೇಳಿಸಿದವರೇ ಇತ್ತ ಚುನಾವಣಾ ಪ್ರಚಾರ, ಅತ್ತ ಕುಂಭಮೇಳಗಳಲ್ಲಿ ತಮ್ಮನ್ನು ಮುಳುಗಿಸಿಕೊಂಡು 'ಬಾ ಕೊರೊನಾ, ಬಾ' ಎಂಬಂತೆ ವರ್ತಿಸಿದ್ದು ಜನನಾಯಕರ ಆದ್ಯತೆಯನ್ನು ತೋರಿಸುತ್ತದೆ. ಮಧ್ಯಪ್ರದೇಶದಲ್ಲಿ ಆಮ್ಲಜನಕವಿಲ್ಲದೆ ಸರಣಿ ಸಾವು ಸಂಭವಿಸುತ್ತಿರುವಾಗ ತುರ್ತಾಗಿ ಆಮ್ಲಜನಕ ತರುತ್ತಿದ್ದ ಟ್ಯಾಂಕರನ್ನೂ ಅಡ್ಡಗಟ್ಟಿ ಗಣ್ಯರು ಹೂಮಾಲೆ, ಆರತಿ, ಸೆಲ್ಫಿಯಲ್ಲಿ ತೊಡಗಿದ್ದು ತುರ್ತುಮೌಢ್ಯದ ಚಾರಿತ್ರಿಕ ದಾಖಲೆಗಳಾಗುತ್ತವೆ. ಎಲ್ಲ ಸೌಕರ್ಯಗಳೂ ಎಲ್ಲ ಬಗೆಯ ತಜ್ಞರೂ ಇರುವ ಮಹಾನಗರಗಳಲ್ಲೇ ಈ ದುರವಸ್ಥೆ ಮಡುಗಟ್ಟಿದೆ ಎಂದರೆ, ಚಿಕ್ಕಪುಟ್ಟ ಹಳ್ಳಿ-ಪಟ್ಟಣಗಳತ್ತ ಕೋವಿಡ್-19 ವ್ಯಾಪಿಸಿದಾಗಿನ ಸ್ಥಿತಿ ಊಹೆಗೂ ನಿಲುಕದಂತಾಗುತ್ತದೆ. ಮನೆಗಳಲ್ಲಿ ಶುಶ್ರೂಷೆಗೆ ಬೇಕಿದ್ದ ಕನಿಷ್ಠ ಸೌಲಭ್ಯಗಳನ್ನೂ ಸರ್ಕಾರ ಹಿಂತೆಗೆದುಕೊಂಡಿದೆ. ಆಮ್ಲಜನಕದ ಸಾಂದ್ರೀಕರಣ ಯಂತ್ರಗಳೂ ತುರ್ತು ಔಷಧಗಳೂ ಕಾಳಸಂತೆ ಸೇರಿವೆ. ತುರ್ತುಸೇವೆಗೆ ನಿಯೋಜಿತರಾಗಿದ್ದ ಗೃಹರಕ್ಷಕ ದಳವನ್ನೂ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಇತ್ತ ಲಸಿಕೆಯ ಅಭಾವವೂ ತಲೆದೋರಿದ್ದು ಅದರ ಉತ್ಪಾದನೆಗೆ ಬೇಕಿದ್ದ ಉಪ
ದ್ರವ್ಯಗಳನ್ನು ಅಮೆರಿಕವು ಹೊರಗೆ ಸಾಗಿಸಲು ಅವಕಾಶ ನೀಡದಿರುವುದರಿಂದ ಹೊಸದೊಂದು ಬಿಕ್ಕಟ್ಟು ಕ್ಷಿತಿಜದಲ್ಲಿ ಕಾಣಿಸಿಕೊಂಡಿದೆ. ಇಂಥ ಗಂಭೀರ ಸಂದರ್ಭದ ಮಧ್ಯೆಯೇ ಪ್ರಧಾನಿಯವರು ಪಶ್ಚಿಮ ಬಂಗಾಳದ ಚುನಾವಣಾ ಸಭೆಯಲ್ಲಿ ಒತ್ತೊತ್ತಿ ನಿಂತ ಜನಸ್ತೋಮಕ್ಕೆ ಶಹಭಾಸ್ ಎಂದಿದ್ದು ಸರಿಯೇ?