ನವದೆಹಲಿ : ಮರು ವಿವಾಹವಾದ ಮಹಿಳೆಗೆ ಮೊದಲ ಪತಿಯ ಮರಣಾನಂತರ ಸಿಗುವ ಅಪಘಾತದ ವಿಮಾ ಹಣದಲ್ಲಿ ಪಾಲು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಮಹಿಳೆ ಮೃತನ ಪೋಷಕರ ಜೊತೆಯಲ್ಲಿ ಪರಿಹಾರಕ್ಕೆ ಸಮಾನ ಪಾಲುದಾರಳು ಎಂದು ಹೇಳಿದೆ.
ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತ ಪಟ್ಟಿದ್ದರು. ಅದಕ್ಕೆ ಸಂಬಂಧಪಟ್ಟಂತಾ ವಿಮಾ ಹಣ ಪಡೆಯುವಾಗ ತಗಾದೆ ಎದುರಾಗಿತ್ತು. ಪತಿಯ ಮರಣದ ನಂತರ ಮಹಿಳೆ ಮತ್ತೊಂದು ಮದುವೆಯಾಗಿರುವ ಕಾರಣ ಪರಿಹಾರಕ್ಕೆ ಅರ್ಹರಲ್ಲ ಎಂದು ಮೃತನ ಪೋಷಕರು ಮತ್ತು ವಿಮಾ ಕಂಪೆನಿ ವಾದಿಸಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಲ್.ನಾಗೇಶ್ವರ್ ರಾವ್ ಮತ್ತು ವೀನಿತ್ ಶರ್ಮಾ ಅವರನ್ನು ಒಳಗೊಂಡ ಪೀಠ, ಅಂಜು ಮುಖಿ ಮತ್ತು ಅನರ್ ಹಾಗೂ ಸತೀಶ್ ಕೆ.ಭಾಟೀಯ ಪ್ರಕರಣದ ತೀರ್ಪನ್ನು ಉಲ್ಲೆಖಿಸಿ ನ್ಯಾಯಾಲಯ, ಅಪಘಾತ ಸಂಭವಿಸಿದಾಗ ಮಹಿಳೆ ಮೊದಲ ಪತಿಯ ಆಶ್ರಯದಲ್ಲಿದ್ದರು.
ಹಾಗಾಗಿ ಆಕೆ ಪರಿಹಾರಕ್ಕೆ ಅರ್ಹಳಿದ್ದಾಳೆ. ಮರು ಮದುವೆಯಾದ ಮೇಲೆ ಮಹಿಳೆ ಮೊದಲ ಪತಿಯ ಅವಲಂಬಿತೆಯಲ್ಲ ಎಂದು ಹೇಳಲಾಗು ವುದಿಲ್ಲ. ಹಾಗಾಗಿ ಆಕೆಗೆ ಪರಿಹಾರ ನೀಡಬೇಕು ಎಂದಿದೆ.