ನವದೆಹಲಿ : ಕೋವಿಡ್ 2ನೇ ಅಲೆ ಅಬ್ಬರ ಜೋರಾಗಿರುವ ಸಂದರ್ಭದಲ್ಲೇ ಭಾರತದಲ್ಲಿ ಮೂರನೇ ಹಂತದ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದೆ. ಮೇ1ರಿಂದ ಆರಂಭವಾಗುವ ಅಭಿಯಾನಕ್ಕೆ ಏಪ್ರಿಲ್ 28ರಿಂದಲೇ ನೋಂದಣಿಯಾಗಲು ಅವಕಾಶ ನೀಡಲಾಗಿತ್ತು. ಆದರೆ, ಇಂದು ಸಂಜೆ 4 ಗಂಟೆಗೆ ನೋಂದಣಿ ಮಾಡಲು ಯತ್ನಿಸಿದ ಹಲವರಿಗೆ ತಾಂತ್ರಿಕ ತೊಂದರೆಯ ಕಿರಿಕಿರಿ ಅನುಭವವಾಗಿತ್ತು. ಇನ್ನು ಕೆಲವರು ರಾತ್ರಿ 12 ದಾಟುತ್ತಿದ್ದಂತೆ ನೋಂದಣಿ ಮಾಡಲು ಯತ್ನಿಸಿ ವಿಫಲರಾಗಿದ್ದರು. ಸಂಜೆ ವೇಳೆಗೆ ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದರು.
ಆದರೆ, ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಸರ್ವರ್ ಕ್ರಾಶ್ ಆಗಿದೆ ಎಂಬುದೆಲ್ಲ ಸುಳ್ಳು, ತಾಂತ್ರಿಕ ದೋಷದಿಂದ ಆಪ್/ ವೆಬ್ ಮೂಲಕ ನೋಂದಣಿಯಲ್ಲಿ ತೊಂದರೆ ಉಂಟಾಗಿತ್ತು, ಈಗ ನೋಂದಣಿ ಪ್ರಕ್ರಿಯೆ ಮಾಡಬಹುದು ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಲಸಿಕೆ ನೋಂದಣಿ) ಸಿಇಒ ಆರ್. ಎಸ್ ಶರ್ಮ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ 102 ದಿನ ಕಳೆದಿದೆ. ಈವರೆಗೂ 14.78 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಸೋಮವಾರ ರಾತ್ರಿ 8 ಗಂಟೆ ವೇಳೆಗೆ 25 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ.
ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.
ಕೋವಿನ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ ಯಾವ ಆಸ್ಪತ್ರೆ, ಚಿಕಿತ್ಸಾ ಕೇಂದ್ರದಲ್ಲಿ ಯಾವ ದರದಲ್ಲಿ ಲಸಿಕೆ ಲಭ್ಯವಿದೆ ಎಂಬ ವಿವರ ಕೈಬೆರಳ ತುದಿಯಲ್ಲೆ ಲಭ್ಯವಿರಲಿದೆ. ಖಾಸಗಿ ಆಸ್ಪತ್ರೆಗಳ ವಿವರ ಕೂಡಾ ಅಪ್ಡೇಟ್ ಆಗುತ್ತಿದೆ ಎಂದು ಶರ್ಮ ಹೇಳಿದರು.
ಏಪ್ರಿಲ್ 28ರಿಂದ CoWin ವೆಬ್ ಸೈಟ್, ಮೊಬೈಲ್ ಅಪ್ಲಿಕೇಷನ್, UMANG app ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು ಎಂದು MyGov ಟೆಲಿಗ್ರಾಂ ಅಧಿಕೃತ ಗುಂಪಿನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಕೊವಿಶೀಲ್ಡ್ ಲಸಿಕೆ ಪಡೆದ 4ರಿಂದ 6 ವಾರ ದಿಂದ 4 ರಿಂದ 8 ವಾರಗಳ ಒಳಗೆ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಇದೇ ರೀತಿ ಕೋವ್ಯಾಕ್ಸಿನ್ ಮೊದಲ ಲಸಿಕೆ ಪಡೆದ 4 ರಿಂದ 6 ವಾರದೊಳಗೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು.