ತಿರುವನಂತಪುರ: ಕೋವಿಡ್ ಲಸಿಕೆಯನ್ನು ರಾಜ್ಯದ ಎಲ್ಲರಿಗೂ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುನರುಚ್ಚರಿಸಿದ್ದಾರೆ. ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಈ ತೀರ್ಮಾನದಲ್ಲಿ ಬದಲಾವಣೆ ಇಲ್ಲ. ವಯಸ್ಸನ್ನು ಆಧರಿಸಿಯೂ ಬದಲಾವಣೆ ಇಲ್ಲ. ಲಸಿಕೆ ಎಲ್ಲಾ ವಯಸ್ಸಿನವರಿಗೂ ಉಚಿತವಾಗಲಿದೆ ಎಂದು ಸಿಎಂ ಹೇಳಿದರು.
ಪ್ರಸ್ತುತ ಲಾಕ್ ಡೌನ್ ಹೇರುವುದನ್ನು ಪರಿಗಣಿಸುತ್ತಿಲ್ಲ. ಕೋವಿಡ್ ನ್ನು ಎದುರಿಸಲು ರಾಜ್ಯವು ಬಲವಾದ ಕಾರ್ಯವಿಧಾನವನ್ನು ಅನುಸರಿಸುತ್ತಿದೆ. ಎರಡನೇ ತರಂಗದ ಸಂದರ್ಭದಲ್ಲಿ ಲಾಕ್ ಡೌನ್ ಹೇರುವ ಚಿಂತನೆ ಇಲ್ಲ. ಆದರೆ ನಿಬಂಧನೆಗಳನ್ನು ಕಠಿಣಗೊಳಿಸಲಾಗುವುದು ಎಂದು ಸಿಎಂ ಹೇಳಿದರು.
ಇದರಿಂದ ಜನರಿಗೆ ಲಸಿಕೆ ಪಡೆಯುವುದು ಸುಲಲಿತವಾಗಲಿದೆ. ವ್ಯಾಕ್ಸಿನೇಷನ್ ಎಲ್ಲಾ ಸ್ಥಳಗಳಲ್ಲಿ ಆನ್ ಲೈನ್ ನೋಂದಣಿ ಮತ್ತು ವೇಳಾಪಟ್ಟಿಯನ್ನು ಕಡ್ಡಾಯಗೊಳಿಸುತ್ತದೆ. ವ್ಯಾಕ್ಸಿನೇಷನ್ ನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಲಕ್ಷ್ಯವಿರಿಸಿದೆ ಎಂದರು.
ರಾಜ್ಯ ಕ್ಕೆ ಬೇಕಾಗುವುದನ್ನು ಸರ್ಕಾರ ಮಾಡುತ್ತದೆ. ಲಸಿಕೆ ವಿತರಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ಆದರೆ ಹಣ ನೀಡಿ ಖರೀದಿಸುವುದು ರಾಜ್ಯಕ್ಕೆ ಹೊರೆಯಾಗಲಿದೆ. ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ಕೇಂದ್ರದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ. ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳು ಮತ್ತು ರಾಜಕೀಯ ಪಕ್ಷಗಳ ಸಭೆ ಕರೆಯಲಾಗುವುದು ಎಂದರು.
ಚುನಾವಣಾ ಫಲಿತಾಂಶ ಘೋಷಣೆಯ ದಿನ ನಿಯಂತ್ರಣಗಳನ್ನು ಹೇರುವ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಉಪವಾಸದ ಸಂದರ್ಭವಾಗಿರುವುದರಿಂದ ಆಹಾರ ಪೂರೈಕೆಗೆ ಅಡ್ಡಿಯಾಗದಂತೆ ಕಾಳಜಿ ವಹಿಸಲಾಗುವುದು. ನೆರೆಯ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಾಗುತ್ತಿರುವುದರಿಂದ ಉತ್ತಮ ಜಾಗರೂಕತೆ ವಹಿಸಬೇಕು ಎಂದು ಸಿಎಂ ಹೇಳಿದರು.