ಬದಿಯಡ್ಕ: ಕಿಳಿಂಗಾರು ನಡುಮನೆಯಲ್ಲಿ ವಾರ್ಷಿಕ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಜರಗಿತು.
ಇಲ್ಲಿ ನಡೆದ ಶತರುದ್ರ, ದೇವಕಾರ್ಯ ಮತ್ತು ವಸಿಷ್ಠ ಪ್ರಶಸ್ತಿ ಪೀಠದ ವಾರ್ಷಿಕೋತ್ಸವ ಅಂಗವಾಗಿ ಈ ಸಮಾರಂಭ ಆಯೋಜಿಸಲಾಗಿತ್ತು. ಎಡನೀರು ಮಠಾಧೀಶ ಶ್ರೀ ಸಚ್ಚದಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಕರ್ನಾಟಕ ಸರ್ಕಾರದ ಬಿ.ಡಿ.ಎ. ನಿವೃತ್ತ ಆಯುಕ್ತ ಡಾ.ಟಿ.ಶಾಮಭಟ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಬ್ರಹ್ಮಶ್ರೀ ವೇದಮೂರ್ತಿ ಗೋವಿಂದ ಭಟ್ ಮತ್ತು ಬ್ರಹ್ಮಶ್ರೀ ಜ್ಯೋತಿಷಿ ವೆಂಕಟ್ರಮಣ ಭಟ್ ವಳಕ್ಕುಂಜ ಅವರಿಗೆ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಮೂರ್ತಿ ಶಂಕರನಾರಾಯಣ ಮಯ್ಯ ಐಲ ಅವರಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಕೃಷ್ಣಯ್ಯ ಮಾಸ್ತರ್ ಅವರ ಕೊಡುಗೆಯಾಗಿ ಅಸೌಖ್ಯದಲ್ಲಿರುವ ಮಂದಿಗೆ ನೀಡಲಾಗುವ ಆರ್ಥಿಕ ಸಹಾಯವನ್ನು ಅಜ್ಜಿಮೂಲೆ ಗೋಪಾಲಕೃಷ್ಣ ಭಟ್ಟರ ಪುತ್ರ ಡಾ.ಗೀರೀಶ್ ಕೆ. ಮತ್ತು ಪದ್ಮನಾಭ-ಪುಷ್ಪಲತಾ ಅವರ ಪುತ್ರ ಅಕ್ಷಯ್ ಅವರಿಗೆ ಹಸ್ತಾಂತರಿಸಲಾಯಿತು. ಎಡನೀರು ಮಠದಲ್ಲಿ ಶುಭಾರಂಭಗೊಳ್ಳಲಿರುವ ವೇದಪಾಠ ಶಾಲೆಗೆ ಗುರುಗಳಾಗಿ ನಿಯುಕ್ತರಾದ ಕೃಷ್ಣ ಭಟ್ ಯಲ್ಲಾಪುರ ಅವರನ್ನು ಗೌರವಿಸಲಾಯಿತು.
ಬಿ.ಜೆ.ಪಿ. ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಪುತ್ತೂರು ಪುರಸಭೆಯ ಉಪಾಧ್ಯಕ್ಷೆ ವಿದ್ಯಾಗೌರಿ ವಿಶೇಷ ಅತಿಥಿಗಳಾಗಿದ್ದರು.
ವಿದ್ವಾನ್. ಹಿರಣ್ಯ ವೆಂಕಟೇಶ ಭಟ್ ಅಭಿನಂದನಾ ಭಾಷಣ ಮಾಡಿದರು. ಕಿಳಿಂಗಾರು ನಡುಮನೆಯ ವೇದಮೂರ್ತಿ ಗೋಪಾಲಕೃಷ್ಣ ಭಟ್ ಅವರು ಸ್ವಾಗತಿಸಿ, ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಕೆ.ಎನ್.ಕೃಷ್ಣ ಭಟ್ ವಂದಿಸಿದರು. ಕಲಾವಿದ ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು.