ನವದೆಹಲಿ : ಕೊರೊನಾ 2ನೇ ಅಲೆ ನಡುವೆಯೂ ಉತ್ತರಾಖಂಡ್ ಕುಂಭಮೇಳದಲ್ಲಿ ಸಾವಿರಾರು ಭಕ್ತಾದಿಗಳು ನೆರೆದಿದ್ದಾರೆ. ಹರಿದ್ವಾರದ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಆದರೆ ಕೊವಿಡ್-19 ಶಿಷ್ಟಾಚಾರದ ಉಲ್ಲಂಘನೆ ಮಾಡಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಿಸಿದೆ. ಹರ್ ಕೀ ಪೌರ್ ಘಾಟ್ ಬಳಿ ಸಾವಿರಾರು ಭಕ್ತಾಧಿಗಳು ಶಾಹಿ ಸ್ನಾನ್(ಪುಣ್ಯ ಸ್ನಾನ) ಸಂದರ್ಭದಲ್ಲಿ ಕೊರೊನಾ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.
ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳು ಮತ್ತು ಪ್ರವಾಸಿಗರು 72 ಗಂಟೆಗಳಿಗೂ ಮೊದಲು ಕೊವಿಡ್-19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಹೊಂದಿರಬೇಕು ಎಂದು ಉತ್ತರಾಖಂಡ್ ಹೈಕೋರ್ಟ್ ಮೊದಲೇ ಆದೇಶ ನೀಡಿದೆ.
ಕೊರೊನಾವೈರಸ್ ಶಿಷ್ಟಾಚಾರ ಪಾಲನೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿರಂತರವಾಗಿ ಭಕ್ತಾಧಿಗಳಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಹೀಗಿದ್ದರೂ ಕುಂಭಮೇಳದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು ವಾಸ್ತವದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಐಜಿ ಸಂಜಯ್ ಗುಂಜ್ಯಾಲ್ ತಿಳಿಸಿದ್ದಾರೆ.
ಹರಿದ್ವಾರ, ನಾಸಿಕ್, ಪ್ರಯಾಗ್ ರಾಜ್ ಮತ್ತು ಉಜ್ಜೈನಿ ಕ್ಷೇತ್ರಗಳಲ್ಲಿ ಪ್ರತಿ 12 ವರ್ಷಗಳಿಗೆ ಒಮ್ಮೆ ಈ ಕುಂಭ ಮೇಳವನ್ನು ಆಚರಿಸಲಾಗುತ್ತದೆ. 2021ನೇ ಸಾಲಿನಲ್ಲಿ ನಡೆಯುತ್ತಿರುವ ಕುಂಭ ಮೇಳವು 12 ವರ್ಷದ ಬದಲಿಗೆ 11ನೇ ವರ್ಷಕ್ಕೆ ನಡೆಯುತ್ತಿದೆ. ಈ ಕುಂಭಮೇಳವು ಸಾಮಾನ್ಯವಾಗಿ 4 ತಿಂಗಳವರೆಗೂ ನಡೆಯುತ್ತದೆ. ಆದರೆ ಕೊರೊನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಏಪ್ರಿಲ್ 1ರಿಂದ 30ರವರೆಗೂ ಮಾತ್ರ ಕುಂಭಮೇಳ ನಡೆಸಲು ಅನುಮತಿ ನೀಡಲಾಗಿದೆ.