ಚೆನ್ನೈ: ಸತ್ಯಮಂಗಲಂ ಅರಣ್ಯದಲ್ಲಿ ನಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಅಡಗಿಸಿಟ್ಟಿದ್ದಾರೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ವಾಲ್ಮುರಿಮಾಯಿ ಕಚ್ಚಿಯಲ್ಲಿ ವಾಸಿಸುತ್ತಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು ರನ್ ಪಿಳ್ಳೈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದ ವಿಚಾರವಾಗಿ ಚೆನ್ನೈನಲ್ಲಿ ಚಿತ್ರತಂಡ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯಲಕ್ಷ್ಮಿ, ತಮ್ಮ ತಂದೆ ವೀರಪ್ಪನ್ ವಾಸಿಸುತ್ತಿದ್ದ ಸತ್ಯಮಂಗಲಂ ಕಾಡಿನಲ್ಲಿ ಬೃಹತ್ ಫಂಡ್ ಡಂಪ್ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
'ನಮ್ಮ ತಂದೆ ವೀರಪ್ಪನ್ ಅವರಿಗೆ ಸತ್ಯಮಂಗಲಂ ಕಾಡು ಎಂದರೆ ತುಂಬಾ ಇಷ್ಟ. ಸತ್ಯಮಂಗಲಂ ಕಾಡಿನಲ್ಲಿ ಅವರು ಬಹಳ ಕಾಲ ವಾಸಿಸುತ್ತಿದ್ದರು ಎಂಬುದು ನಮಗೆ ನೆನಪಿದೆ. ಈ ಕಾಡಿನಲ್ಲಿ ತನ್ನ ತಂದೆ ಮರೆಮಾಡಿದ ದೊಡ್ಡ ನಿಧಿ ಇದೆ ಮತ್ತು ಅದನ್ನು ಕಂಡುಹಿಡಿಯುವ ಅಗತ್ಯವಿದೆ. ಇದರ ಬಗ್ಗೆ ಮಾಹಿತಿ ಇದ್ದ ಅವರ ಅನುಯಾಯಿಗಳು ಯಾರೂ ಈಗ ಬದುಕಿಲ್ಲ. ಹೀಗಾಗಿ ಈ ನಿಧಿ ಎಲ್ಲಿದೆ ಎಂಬುದು ತಿಳಿದಿಲ್ಲ.. ಈ ಬಗ್ಗೆ ಇನ್ನೂ ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.
ವೀರಪ್ಪನ್ ಮತ್ತು ಅವರ ಪತ್ನಿ ಮುತ್ತು ಲಕ್ಷ್ಮಿ ದಂಪತಿಗೆ, ವಿದ್ಯಾರಾಣಿ ಮತ್ತು ವಿಜಯಲಕ್ಷ್ಮಿ ಎಂಬ ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ವಿದ್ಯಾರಾಣಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮಹಿಳಾ ಯುವ ಘಟಕದ ನಾಯಕಿಯಾಗಿದ್ದಾರೆ. ಮತ್ತೋರ್ವ ಪುತ್ರಿ ವಿಜಯಲಕ್ಷ್ಮಿ ಇತ್ತೀಚೆಗೆ ಸಿನಿಮಾ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಇನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ವೀರಪ್ಪನ್ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿದ್ದ. ಸತ್ಯಮಂಗಲಂ ಅರಣ್ಯ ಪ್ರದೇಶವನ್ನು ತನ್ನ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದ ವೀರಪ್ಪನ್ ಶ್ರೀಗಂಧದ ಮರಗಳು, ಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ. ಕನ್ನಡದ ಚಿತ್ರನಟ ಡಾ.ರಾಜ್ ಕುಮಾರ್ ಅಪಹರಣದ ಮೂಲಕ ವೀರಪ್ಪನ್ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ. ಬಳಿಕ 2004 ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆತನನ್ನು ಪೊಲೀಸರು ಕೊಂದು ಹಾಕಿದ್ದರು. ವೀರಪ್ಪನ್ ಕಳ್ಳಸಾಗಣೆ ಇತಿಹಾಸ ಮುಕ್ತಾಯವಾಗಿದ್ದರೂ, ಆತನ ಸುದ್ದಿ ಮಾತ್ರ ಆಗಾಗ್ಗೆ ಚಾಲ್ತಿಗೆ ಬರುತ್ತಿದೆ.