ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾದೀಶರಾದ ಎನ್ ವಿ ರಮಣ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರ ಶಿಫಾರಸ್ಸಿನಂತೆ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.
ಇದೇ ಏಪ್ರಿಲ್ 23ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರು ನಿವೃತ್ತಿಯಾಗುತ್ತಿದ್ದು, ಏಪ್ರಿಲ್ 24ರಿಂದ ರಮಣ ಅವರು ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವ ಮುನ್ನ ಉತ್ತರಾಧಿಕಾರಿ ಹೆಸರನ್ನು ಸೂಚಿಸುವುದು ಸಂಪ್ರದಾಯ. ಹಾಗೆಯೇ, ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದೂ ಕೂಡ ಸಾಂಪ್ರದಾಯ. ಸಿಜೆಐ ಶರದ್ ಅರವಿಂದ್ ಬೋಬ್ಡೆ ಬಳಿಕ ನ್ಯಾ. ಎನ್ ವಿ ರಮಣ ಅವರೇ ಸುಪ್ರೀಂ ಕೋರ್ಟ್ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ನ್ಯಾ. ರಮಣ ಅವರ ಸೇವಾವಧಿ 2022, ಆಗಸ್ಟ್ 26ರವರೆಗೂ ಇದೆ. ಹೀಗಾಗಿ ಎನ್ ವಿ ರಮಣ ಅವರನ್ನು ಮುಂದಿನ ಸಿಜೆಐ ಆಗಿ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರು ಶಿಫಾರಸ್ಸು ಮಾಡಿದ್ದರು.
1957, ಆಗಸ್ಟ್ 27ರಂದು ಜನಿಸಿದ ನ್ಯಾ| ರಮಣ ಅವರು 2000ರ ಜೂನ್ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಅದಾದ ಬಳಿಕ ಅವರ ಅವರು ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನಂತರ 2014, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರನ್ನ ನೇಮಕ ಮಾಡಲಾಗಿತ್ತು.