ಪೆರ್ಲ:ಬಿಜೆಪಿಯನ್ನು ಮಣಿಸಲು ಹರಸಾಹಸ ನಡೆಸಿರುವ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಭ್ರಷ್ಟಾಚಾರ ನಡೆಸಲು, ಜನರ ಹಣವನ್ನು ಲೂಟಿ ಮಾಡಲು ಪರಸ್ಪರ ಮೈತ್ರಿಯಲ್ಲಿ ತೊಡಗಿದ್ದಾರೆಯೇ ಹೊರತು ಬಿಜೆಪಿಯನ್ನು ಸೋಲಿಸುವುದು ಅಥವಾ ದೇಶದ ಅಭಿವೃದ್ಧಿ ಮಹಾ ಮೈತ್ರಿಯ ಉದ್ದೇಶವಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜವಳಿ ಖಾತೆ ಸಚಿವೆ ಸ್ಮೃತಿ ಜುಬಿನ್ ಇರಾನಿ ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಮಂಜೇಶ್ವರ ವಿಧಾನ ಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಚುನಾವಣಾ ಪ್ರಚಾರಾರ್ಥ ಶನುವಾರ ಸಂಜೆ ಪೆರ್ಲ ಸತ್ಯ ನಾರಾಯಣ ಹೈಸ್ಕೂಲ್ ಮೈದಾನದಲ್ಲಿ ಶನಿವಾರ sÀನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾವುದೇ ರಾಜ್ಯದೊಂದಿಗೆ ತಾರತಮ್ಯ ತೋರಿಲ್ಲ. ಕೇರಳದ 36,000 ಕೃಷಿಕರಿಗೆ ವರ್ಷದಲ್ಲಿ 6,000ದಂತೆ 4,000 ಕೋಟಿ ವಿತರಿಸಿದೆ.ಭವಿಷ್ಯದ ಚಿಂತನೆಯೊಂದಿಗೆ ಯುವ ಜನತೆಯ ಬೆಂಬಲಕ್ಕೆ ನಿಂತ ಮೋದಿ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ.ಕೇರಳದಲ್ಲಿ ಅದಲು ಬದಲಾಗಿ ಆಡಳಿತ ನಡೆಸುತ್ತಿರುವ ಎಡ ಬಲ ರಂಗಗಳಲ್ಲಿ ಒಂದು ಸೋಲಾರ್ ಹಗರಣ ನಡೆಸಿದರೆ ಇನ್ನೊಂದು ಚಿನ್ನ ಕಳ್ಳ ಸಾಗಾಟಕ್ಕೆ ಬೆಂಬಲ ನೀಡಿದೆ.ಎಡ ರಂಗ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದರೆ ಬಲರಂಗ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.ಲೋಕ ಸೇವಾ ಆಯೋಗದ ಮೂಲಕ ಉದ್ಯೋಗ ನೇಮಕಾತಿ ಗೊಳಿಸುವ ಬದಲು ಕೇರಳದ ಆಡಳಿತದ ಚುಕ್ಕಾಣಿ ಹಿಡಿದವರು ತಮ್ಮ ಬಂಧು ಬಳಗದ ನೇಮಕಾತಿ ನಡೆಸುತ್ತಿದೆ.ಅಮೇಠಿಯಲ್ಲಿ ಸೋತ ರಾಹುಲ್ ಗಾಂಧಿ ತನ್ನನ್ನು ಉಳಿಸಿಕೊಳ್ಳಲು ಕೇರಳದ ವಯನಾಡು ಸಂಸದೀಯ ಕ್ಷೇತ್ರವನ್ನು ಆರಿಸಿದ್ದಾರೆಯೇ ಹೊರತು ಇಲ್ಲಿನ ಜನ ಸೇವೆ ಮಾಡಲು ಬಂದಿಲ್ಲ.ಕೇರಳವನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಮುಳುಗುವ ಹಡಗಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಎಡಪಕ್ಷ ತನ್ನ ಅರಿವಿಗೂ ಬಾರದೆ ತಾನೂ ಮುಳುಗತೊಡಗಿದೆ ಎಂದರು.
ಅಭ್ಯರ್ಥಿ ಕೆ.ಸುರೇಂದ್ರನ್ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮುಸ್ಲಿಂಲೀಗ್, ಮತ್ತು ಸಿಪಿಎಂ ಕಳ್ಳ ಮತದಾನ, ವಂಚನೆ ನಡೆಸಿ ಬಿಜೆಪಿಯನ್ನು ಕೇವಲ 89 ಮತಗಳ ಅಂತರದಿಂದ ಸೋಲುವಂತೆ ಮಾಡಿದೆ.ಆ ಸೋಲು ಬಿಜೆಪಿ ಅಥವಾ ಅಭ್ಯರ್ಥಿಯ ಸೋಲಲ್ಲ.ಬದಲಾಗಿ ಮಂಜೇಶ್ವರದ ಅಭಿವೃದ್ಧಿಯ ಹಿನ್ನಡೆ ಹಾಗೂ ಜನರನ್ನು ಸೋಲಾಗಿದೆ ಎಂದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಫುಲ್ ಕೃಷ್ಣ ಮಾತನಾಡಿದರು.ಮಂಗಳೂರು ಉತ್ತರ ವಲಯ ಶಾಸಕ ಡಾ.ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿ, ಚುನಾವಣಾ ಪ್ರಭಾರಿ, ಸಂತೋಷ್ ಕುಮಾರ್ ಬೋಳಿಯೂರು, ದ.ಕ.ಬಿಜೆಪಿ ಅಧ್ಯಕ್ಷ ಎಂ.ಸುದರ್ಶನ, ಯುಎಇ ಎಕ್ಸ್ಚೇಂಜ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ರಾಜ್ಯ, ಜಿಲ್ಲೆ, ಮಂಡಲ, ಪಂಚಾಯಿತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್ ಸ್ವಾಗತಿಸಿದರು.ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ ಬಿ.ಎಂ. ವಂದಿಸಿದರು.ಜತೆ ಕಾರ್ಯದರ್ಶಿ ಸುರೇಶ್ ವಾಣೀನಗರ ವಂದಿಸಿದರು
ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ, ಮಂಜೇಶ್ವರ ವಿಧಾನ ಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಅವರನ್ನು ತುಳು ನಾಡಿನ ಸಾಂಪ್ರದಾಯಿಕ ರೀತಿಯಲ್ಲಿ ತಲೆಗೆ ಹಾಳೆ(ಮುಟ್ಟಾಳೆ)ತೊಡಿಸಿ, ಅಡಕೆ ಗೊಂಚಲು ನೀಡಿ, ಪುಷ್ಪಾ ಹಾರದೊಂದಿಗೆ ಸ್ವಾಗತಿಸಲಾಯಿತು.