ಕಾಸರಗೋಡು : ರಾಜ್ಯದಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯ ದರವನ್ನು ಕಡಿಮೆ ಮಾಡುವ ನಿರ್ಧಾರ ಸರ್ಕಾರ ಮತ್ತು ಖಾಸಗೀ ಪ್ರಯೋಗಾಲಯಗಳ ನಡುವಿನ ಹೊಂದಾಣಿಕೆಯ ಭಾಗವಾಗಿದೆ ಎಂದು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಪ್ರಫುಲ್ ಕೃಷ್ಣನ್ ಹೇಳಿದ್ದಾರೆ.
ರಾಜ್ಯದಲ್ಲಿ ಲಸಿಕೆಗಳ ವಿತರಣೆಯಲ್ಲಿನ ಅಕ್ರಮಗಳ ವಿರುದ್ಧ ಯುವಮೋರ್ಚಾ ರಾಜ್ಯಾದ್ಯಂತ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆಯ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು.
ದರಗಳನ್ನು ಕಡಿಮೆ ಮಾಡಲು ಖಾಸಗೀ ಲ್ಯಾಬ್‍ಗಳು ಸಿದ್ಧರಾಗದಿದ್ದಲ್ಲಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ನಡೆಯಲಿದೆ ಎಂದು ಪ್ರಫುಲ್ ಕೃಷ್ಣನ್ ಎಚ್ಚರಿಸಿದ್ದಾರೆ. ದರ ಕಡಿಮೆಯಾದ ಕಾರಣ ತಪಾಸಣೆ ನಡೆಸಲು ನಿರಾಕರಿಸುವ ಲ್ಯಾಬ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಇದು ಲ್ಯಾಬ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಲಾಭ ಗಳಿಸಲು ಸಹಾಯ ಮಾಡಲಿರುವ ಹುನ್ನಾರವಾಗಿದೆ. ಕೇಂದ್ರವು ಮಂಜೂರು ಮಾಡಿದ ಲಸಿಕೆಗಳನ್ನು ಅಕ್ರಮವಾಗಿ ದಾಸ್ತಾನಿರಿಸಿ ರಾಜ್ಯ ಸರ್ಕಾರವು ಕೃತಕ ಕೊರತೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಫುಲ್ ಕೃಷ್ಣನ್ ಆರೋಪಿಸಿದರು. ಆರೋಗ್ಯ ಕ್ಷೇತ್ರವು ಹೆಮ್ಮೆಪಡುವ ಕೇರಳದಲ್ಲಿ, ಸಂಬಂಧಿಕರು ಇತರ ರೋಗಿಗಳೊಂದಿಗೆ ಕೊರೋನಾ ರೋಗಿಯ ದೇಹದೊಂದಿಗೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕಾಯಬೇಕಾದ ದುಸ್ಥಿತಿ ಎದುರಾಗಿರುವುದು ಸರ್ಕಾರದ ಕಾರ್ಯಕ್ಷಮತೆಯ ಕೈಗನ್ನಡಿ. ಅನೇಕ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಪ್ರಾರಂಭವಾಗಿದೆ.ಕೇರಳದ ಆರೋಗ್ಯ ನಿರ್ವಹಣಾ ವ್ಯವಸ್ಥೆ ಹದಗೆಡುತ್ತಿದೆ ಎಂದು ಅವರು ಆರೋಪಿಸಿದರು.
ಆರ್‍ಟಿಪಿಸಿಆರ್ ಪರೀಕ್ಷಾ ದರವನ್ನು 1700 ರೂ.ಗಳಿಂದ 500 ರೂ.ಗೆ ಇಳಿಸಲಾಗಿದ್ದರೂ, ಖಾಸಗೀ ಲ್ಯಾಬ್‍ಗಳು ಹಳೆಯ ದರವನ್ನು ವಿಧಿಸುತ್ತಿರುವುದು ಮುಂದುವರಿದಿದೆ.ರಾಜ್ಯ ಸರ್ಕಾರ ಇನ್ನೂ ಅಧಿಕೃತ ಆದೇಶ ನೀಡುವಲ್ಲಿ ವಿಳಂಬ ಧೋರಣೆ ತಳೆಯುತ್ತಿರುವುದರಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರ ಮತ್ತು ಖಾಸಗೀ ಪ್ರಯೋಗಾಲಯಗಳ ನಡುವಿನ ಹೊಂದಾಣಿಕೆಯ ಭಾಗವಾಗಿದೆ ಎಂದು ಆರೋಪಿಸಿದರು.
ಐಸಿಎಂಆರ್ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಅನುಮೋದಿತ ಪರೀಕ್ಷಾ ಕಿಟ್‍ಗಳ ಲಭ್ಯತೆಯ ದೃಷ್ಟಿಯಿಂದ ಆರ್‍ಟಿಪಿಸಿಆರ್ ಪರೀಕ್ಷಾ ದರವನ್ನು ಕಡಿಮೆ ಮಾಡಲಾಗಿದೆ. ಇತರ ರಾಜ್ಯಗಳು ಈ ಹಿಂದೆ ದರಗಳನ್ನು ಕಡಿಮೆ ಮಾಡಿದ್ದವು. ಆದರೆ ಕೇರಳದಲ್ಲಿ ಕಡಿಮೆ ಮಾಡಲು ಸರ್ಕಾರಕ್ಕೆ ಆಸಕ್ತಿ ಇದ್ದಂತಿಲ್ಲ. ದರ ಕಡಿತಕ್ಕೆ ವಿವಿಧ ಭಾಗಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದು ಕಾರಣ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ ಆದೇಶವನ್ನು ಮತ್ತೆ ತಡೆಹಿಡಿಯಲಾಯಿತು ಎಂದವರು ತಿಳಿಸಿದರು.