ತಿರುವನಂತಪುರ: ಕಣ್ಣೂರು ಜಿಲ್ಲೆಯ ಕೂತುಪರಂಬ ಬಳಿಯ ಪುಲ್ಲುಕ್ಕರ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಇಂಡಿಯನ್ ನ್ಯಾಷನಲ್ ಮುಸ್ಲಿಂ ಲೀಗ್ (ಐಯುಎಂಎಲ್) ಕಾರ್ಯಕರ್ತ ಮನ್ಸೂರ್(22) ಕೊಲೆ ಪ್ರಕರಣದ ಆರೋಪಿಗಳ ಪೈಕಿ ರತೀಶ್ ಕೊಲೊತ್ ಎಂಬಾತ ಶುಕ್ರವಾರ ಕೋಝಿಕೋಡ್‌ನ ವಳಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ರತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದ್ದು,ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪಾಣೂರ್ ನಿವಾಸಿ ರತೀಶ್ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ.
ಎ.6ರಂದು ಮನ್ಸೂರ್ ಮತ್ತು ಯುಡಿಎಫ್ ಮತಗಟ್ಟೆ ಏಜೆಂಟ್ ಆಗಿದ್ದ ಆತನ ಸೋದರ ಮುಹ್ಸಿನ್ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳ ಗುಂಪು ಅವರತ್ತ ಬಾಂಬ್‌ಗಳನ್ನು ಎಸೆದಿತ್ತು ಮತ್ತು ಮನ್ಸೂರ್‌ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮುಹ್ಸಿನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಮನ್ಸೂರ್‌ನ ನೆರೆಯ ನಿವಾಸಿಯಾಗಿದ್ದ ರತೀಶ್ ತಲೆಮರೆಸಿಕೊಂಡಿದ್ದ.
ರಾಜ್ಯ ಪೊಲೀಸರು ಗುರುವಾರ ಪ್ರಕರಣವನ್ನು ಜಿಲ್ಲಾ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಿದ್ದು,15 ಸದಸ್ಯರ ತಂಡವು ತನಿಖೆಯನ್ನು ಆರಂಭಿಸಿದೆ.
ಮನ್ಸೂರ್ ಮೇಲೆ ದಾಳಿ ನಡೆಸಿದ್ದ 24 ಶಂಕಿತರ ಪೈಕಿ 11 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಈ ಪೈಕಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳ ಪೈಕಿ ಕೆಲವರು ಸ್ಥಳೀಯ ಸಿಪಿಎಂ ನಾಯಕರಾಗಿದ್ದಾರೆ. ಹೆಚ್ಚಿನ ಶಂಕಿತರು ಸಿಪಿಎಂ ಕಾರ್ಯಕರ್ತರು ಎನ್ನಲಾಗಿದೆ.
ತನ್ಮಧ್ಯೆ ಐಯುಎಂಎಲ್ ನಾಯಕರು ಪೊಲೀಸ್ ತನಿಖೆಯಲ್ಲಿ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
ತನಿಖೆಯು ನಿಷ್ಪಕ್ಷವಾಗಿ ನಡೆಯಬೇಕು ಮತ್ತು ತನಿಖಾಧಿಕಾರಿಯು ಸಿಪಿಎಂ ಬಗ್ಗೆ ಒಲವು ಹೊಂದಿರಬಾರದು ಎಂದು ಹೇಳಿದ ಐಯುಎಂಎಲ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಂಞಾಲಿಕುಟ್ಟಿ ಅವರು,ಮನ್ಸೂರ್ ಕೊಲೆಯು ಕೇವಲ ರಾಜಕೀಯ ಹತ್ಯೆಯಲ್ಲ. ಕೊಲೆಗೆ ಮುನ್ನ ಒಳಸಂಚು ನಡೆಸಲಾಗಿದೆ. ಸಿಪಿಎಂ ತನ್ನ ಕೊಲೆ ಸಂಸ್ಕೃತಿಯನ್ನು ಬಿಡುವುದಿಲ್ಲ. ಕೇರಳದ ಜನರು ಈ ಬಗ್ಗೆ ಯೋಚಿಸಬೇಕು ಎಂದರು.
ಆರೋಪವನ್ನು ತಿರಸ್ಕರಿಸಿರುವ ಸಿಪಿಎಂ,ಮನ್ಸೂರ್ ನದ್ದು ರಾಜಕೀಯ ಕೊಲೆಯಾಗಿರಲಿಲ್ಲ ಎಂದಿದೆ.