ಮುಂಬೈ : ಕೊರೊನಾ ಪ್ರಕರಣಗಳು ಹೀಗೆ ಏರುಗತಿಯಲ್ಲೇ ಸಾಗುತ್ತಿದ್ದರೆ ಲಾಕ್‌ಡೌನ್ ವಿಧಿಸದೇ ಬೇರೆ ದಾರಿಯೇ ಇಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶುಕ್ರವಾರ ಮಹಾರಾಷ್ಟ್ರದಲ್ಲಿ 47,827 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 202 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಸಿಎಂ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ಹೇರುವುದಿಲ್ಲ. ಆದರೆ ಪರಿಸ್ಥಿತಿ ಹೀಗೇ ಕೆಟ್ಟದಾಗಿ ಮುಂದುವರೆದರೆ ಸರ್ಕಾರಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದ್ದು, ಬ್ರೆಜಿಲ್, ಫಿಲಿಪ್ಪೀನ್ಸ್ ಹಾಗೂ ಯುರೋಪಿಯನ್ ದೇಶಗಳ ಉದಾಹರಣೆಯನ್ನೂ ನೀಡಿದ್ದಾರೆ.
ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ಹದಿನೈದು ಇಪ್ಪತ್ತು ದಿನಗಳಲ್ಲಿ ರಾಜ್ಯದಲ್ಲಿ ಆರೋಗ್ಯ ಸವಲತ್ತುಗಳ ಕೊರತೆಯೂ ಉಂಟಾಗುವ ಸೂಚನೆ ಇದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಕೊರೊನಾ ಪರೀಕ್ಷೆಯನ್ನು ತ್ವರಿತಗೊಳಿಸುವ ಯೋಜನೆಯಿದ್ದು, ಪ್ರತಿನಿತ್ಯ 2.5 ಲಕ್ಷ ಕೊರೊನಾ ಪರೀಕ್ಷೆ ನಡೆಸಬೇಕಿದೆ. ಲಸಿಕೆ ಮಳೆಯಿಂದ ನಿಮ್ಮನ್ನು ರಕ್ಷಿಸಬಹುದಾದ ಕೊಡೆ. ಆದರೆ ಇದು ಮಳೆಯಲ್ಲ, ಪ್ರವಾಹ. ಈ ಸಮಯದಲ್ಲಿ ಹೆಚ್ಚೆಚ್ಚು ಪರೀಕ್ಷೆ ನಡೆಸಲೇಬೇಕಿದೆ ಎಂದು ಹೇಳಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿವೆ. ಸತತ ಮೂರು ವಾರಗಳಿಂದಲೂ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲೇ ಸಾಗಿವೆ. ಗುರುವಾರವೂ 43,183 ಪ್ರಕರಣಗಳು ದಾಖಲಾಗಿದ್ದು, 249 ಮಂದಿ ಸಾವನ್ನಪ್ಪಿದ್ದರು. ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿರುವುದು ರಾಜ್ಯಕ್ಕೆ ಆತಂಕವನ್ನು ತಂದೊಡ್ಡಿದೆ.
ಪುಣೆಯಲ್ಲಿ ಸದ್ಯಕ್ಕೆ ಏಪ್ರಿಲ್ 3ರಿಂದ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಲಾಕ್‌ಡೌನ್ ವಿಧಿಸಲಾಗಿದೆ.