ಕೊಲ್ಲಂ : "ದೃಶ್ಯಂ" ಸಿನಿಮಾ ಶೈಲಿಯಲ್ಲಿ ನಡೆದ ಘಟನೆಯೊಂದರಲ್ಲಿ 44 ವರ್ಷದ ವ್ಯಕ್ತಿಯನ್ನು ಆತನ ಸಹೋದರನೇ ಹೊಡೆದು ಕೊಂದಿದಲ್ಲದೆ ಶವವನ್ನು ತಾಯಿಯ ಸಹಾಯ ಪಡೆದು ಹೂತಿದ್ದ ಘಟನೆ ಎರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೆಳಕು ಕಂಡಿದೆ. ಸಂಬಂಧಿಯೊಬ್ಬರು ಪೊಲೀಸರಿಗೆ ಸೂಚನೆ ನೀಡಿದ ನಂತರ ಪ್ರಕರಣದ ಬಗ್ಗೆ ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ಕೇರಳದ ಕೊಲ್ಲಂನ ಅಂಚಲ್ ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಸಂಬಂಧಿಕರು ಕೊಲೆ ಮಾಡಿ ಅವರ ಮನೆಯ ಬಳಿ ಹೂತಿದ್ದಾರೆ ಎಂದು ಸುಳಿವು ಅರಿತ ಪಥನಮತ್ತಟ್ಟ ಪೋಲೀಸರು ಆರೋಪಿಯನ್ನು ಬಂಧಿಸಿದಾರೆ.
ಮೃತನನ್ನು ಎರೂರ್ ಮೂಲದ 44 ವರ್ಷದ ಶಾಜಿ ಪೀಟರ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕೊಲ್ಲಂನಲ್ಲಿರುವ ಪೋಲೀಸರಿಂದ ಸುಳಿವು ಸಿಕ್ಕಿದ ಬಳಿಕ ಎರೂರ್ ಪೊಲೀಸರು ತಕ್ಷಣ ಶಾಜಿಯ ಹಿರಿಯ ಸಹೋದರ ಸಾಜಿನ್ ಪೀಟರ್, ತಾಯಿ ಪೊನ್ನಮ್ಮ ಮತ್ತು ಸಾಜಿನ್ ಅವರ ಪತ್ನಿ ಆರ್ಯಾಳನ್ನು ವಶಕ್ಕೆ ತೆಗೆದುಕೊಂಡರು. ಮೃತದೇಹವನ್ನು ಹೂತಿದ್ದ ಸ್ಥಳವನ್ನು ಪೊಲೀಸರು ಬುಧವಾರ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ಪರಿಶೀಲಿಸಲಿದ್ದಾರೆ.
ಈ ಘಟನೆ ನಡೆದದ್ದು 2018 ರ ಓಣಂ ಋತುವಿನಲ್ಲಿ . ಶಾಜಿ ಪೀಟರ್ ಅವಿವಾಹಿತರಾಗಿದ್ದ ಮತ್ತು ಮನೆಯಿಂದ ದೂರವಾಗಿದ್ದ, ಅವರು 2018 ರಲ್ಲಿ ಓಣಂ ಋತುವಿನಲ್ಲಿ ತಮ್ಮ ಪೂರ್ವಜರ ಮನೆಗೆ ಬಂದಿದ್ದರು. ಏತನ್ಮಧ್ಯೆ, ಶಾಜಿ ತನ್ನ ಅಣ್ಣ ಸಾಜಿನ್ ಅವರ ಹೆಂಡತಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದು ಕೊಲೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರಿಗೆ ದೊರೆತ ಮಾಹಿತಿಯಂತೆ ಸಾಜಿನ್ ಪೀಟರ್ ಅವನನ್ನು ಥಳಿಸಿ ಕೊಂದಿದ್ದಾನೆ. ತಾಯಿ ಮತ್ತು ಹೆಂಡತಿಯ ಸಹಾಯದಿಂದ ಶವವನ್ನು ಅವರ ಮನೆಯ ಸಮೀಪ ಹೊಲವೊಂದರಲ್ಲಿ ಹೂಳಲಾಯಿತು. ನಂತರ, ಅವರು ಶಾಜಿ ಮಲಪ್ಪುರಂನಲ್ಲಿದ್ದಾರೆ ಎಂದು ಎಲ್ಲರಿಗೂ ತಿಳಿಸಿದರು.