ನವದೆಹಲಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಲು ಬಳಸಲಾಗುತ್ತಿರುವ ರೆಮ್ಡೆಸಿವಿರ್ ಚುಚ್ಚುಮದ್ದನ್ನು ದೇಶದಲ್ಲಿ ಉತ್ಪಾದನೆ ಹೆಚ್ಚಿಸಿ, ದರಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿದೆ.
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಖಾತೆ ಸಹಾಯಕ ಸಚಿವ ಮನ್ಸುಖ್ ಮಾಂಡವಿಯಾ, ದೇಶದಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಲಭ್ಯತೆಯನ್ನು ಪರಿಶೀಲಿಸಿದ್ದಾರೆ. ರೆಮ್ಡೆಸಿವಿರ್ ಔಷಧಿಯ ಎಲ್ಲಾ ತಯಾರಕರು ಹಾಗೂ ಇತರ ಭಾಗಿದಾರರೊಂದಿಗೆ ಸಭೆ ನಡೆಸಿ, ಪ್ರತಿ ತಿಂಗಳಿಗೆ ಏಳು ಸ್ಥಾವರಗಳಲ್ಲಿ ಹೆಚ್ಚುವರಿ 10 ಲಕ್ಷ ಇನ್ ಜೆಕ್ಷನ್ ಉತ್ಪಾದನೆಗೆ ಅನುಮೋದನೆ ನೀಡಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಸ್ತುತ, ಭಾರತದಲ್ಲಿ ಏಳು ಉತ್ಪಾದನಾ ಸಂಸ್ಥೆಗಳು ಪ್ರತಿ ತಿಂಗಳು 38.80 ಲಕ್ಷ ರೆಮ್ಡೆಸಿವಿರ್ ಚುಚ್ಚುಮದ್ದು ಉತ್ಪಾದಿಸುತ್ತಿದೆ.
ವಾರಾಂತ್ಯದ ವೇಳೆಗೆ ಔಷಧಿ ಬೆಲೆಯನ್ನು 3,500 ರೂಗಳಿಗಿಂತ ತಗ್ಗಿಸಲು ರೆಮ್ಡೆಸಿವಿರ್ ತಯಾರಕರು ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಮುಂದಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ದೇಶದಲ್ಲಿ ಕೋವಿಡ್ -19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಮಹಾರಾಷ್ಟ್ರ, ದೆಹಲಿ, ಗುಜರಾತ್, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶ ರಾಜ್ಯಗಳು ರೆಮ್ಡೆಸಿವಿರ್ ಚುಚ್ಚುಮದ್ದಿನ ತೀವ್ರ ಕೊರತೆ ಎದುರಿಸುತ್ತಿವೆ.
ದೇಶದಲ್ಲಿ ಔಷಧಿಯ ತೀವ್ರ ಕೊರತೆಯ ಹಿನ್ನೆಲೆಯಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಿದೇಶಿ ವ್ಯಾಪಾರ ನಿರ್ದೇಶನಾಲಯ ಮುಂದಿನ ಸೂಚನೆ ಬರುವವರೆಗೂ ರೆಮ್ಡೆಸಿವಿರ್ ಹಾಗೂ ಅದರ ಉತ್ಪಾದನೆಯಲ್ಲಿ ಅಗತ್ಯವಿರುವ ಸಕ್ರಿಯ ಔಷಧೀಯ ಪದಾರ್ಥಗಳನ್ನು (ಎಪಿಐ) ರಫ್ತು ನಿಷೇಧಿಸಿ ಆದೇಶ ಹೊರಡಿಸಿದೆ.
ರೆಮ್ಡೆಸಿವಿರ್ ಚುಚ್ಚುಮದ್ದನ್ನು ಅನ್ನು ಎಬೋಲಾ ಚಿಕಿತ್ಸೆಗಾಗಿ 2014 ರಲ್ಲಿ ತಯಾರಿಸಲಾಯಿತು. ಅಂದಿನಿಂದ ಇದನ್ನು SARS ಮತ್ತು MERS ಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
2020 ರಲ್ಲಿ, ಇದನ್ನು ಕೋವಿಡ್ ಚಿಕಿತ್ಸೆಗಾಗಿ ಪುನಃ ಪರಿಚಯಿಸಲಾಗಿದೆ. ಈ ಔಷಧ ಕಡಿಮೆ ಲಕ್ಷಣ ಹೊಂದಿರುವ ರೋಗಿಗಳು ಹಾಗೂ ಆಸ್ಪತ್ರೆಗೆ ದಾಖಲಾಗುವ ಆರಂಭಿಕ ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯಕೀಯ ತಜ್ಞರ ಅಭಿಮತವಾಗಿದೆ.