ಕುಂಬಳೆ: ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾತ ಕ್ಷೇತ್ರವಾದ ಮಂಜೇಶ್ವರ ಕ್ಷೇತ್ರದ ಎಲ್ಲಾ ಪಕ್ಷಗಳಿಂದಲೂ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೊಂದಿಗೆ ಕನ್ನಡಿಗರ ಮುಖಾಮುಖಿ ಕಾರ್ಯಕ್ರಮ ಶನಿವಾರ ಅಪರಾಹ್ನ ಕುಂಬಳೆ ಎಂ.ಎಂ.ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅವರು ವಹಿಸಿದ್ದರು. ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್, ಎನ್.ಡಿ.ಎ. ಅಭ್ಯರ್ಥಿಯ ಪರವಾಗಿ ಮುರಳೀಧರ ಯಾದವ್ ನಾಯ್ಕಾಪು, ಎಲ್.ಡಿ.ಎಫ್. ಅಭ್ಯರ್ಥಿಯ ಪರವಾಗಿ ಯಾಕೂಬ್ ಮೊಯ್ದೀನ್, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಫರೀಯಾ ಝಕೀರ್, ಅನೀಸ್ ಉಪಸ್ಥಿತರಿದ್ದರು.
ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರು ಮಾತನಾಡಿ, ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರದ ಸಮಗ್ರ ಅಭಿವೃದ್ದಿಗೆ ತಾನು ವಿಧಾನ ಸಭಾ ಸದಸ್ಯನಾಗಿ ಆಯ್ಕೆಯಾದಲ್ಲಿ ಗರಿಷ್ಠ ಮಟ್ಟದ ಪ್ರಯತ್ನಗಳನ್ನು ಮಾಡುವೆನು. ಶಾಸಕನಾಗಿ ಆಯ್ಕೆಯಾಗಿ ಆರು ತಿಂಗಳಲ್ಲಿ ಇಲ್ಲಿಯ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎನ್.ಡಿ.ಎ.ಅಭ್ಯರ್ಥಿಯ ಪರವಾಗಿ ಭಾಗವಹಿಸಿದ್ದ ಮುರಳೀಧರ ಯಾದವ್ ನಾಯ್ಕಾಪು ಮಾತನಾಡಿ, ಬಿಜೆಪಿ ಪಕ್ಷ ಕಾಸರಗೋಡಿಗೆ ಸಂಬಂಧಿಸಿ ಎಂದಿಗೂ ಕನ್ನಡಿಗರ ಪರವಾಗಿದೆ. ಕನ್ನಡಪರ ಎಲ್ಲಾ ಹೋರಾಟಗಳಲ್ಲೂ ಪಕ್ಷದ ಕಾರ್ಯಕರ್ತರು ಭಾಗವಹಿಸಿರುತ್ತಾರೆ. ಸಮಗ್ರ ಅಭಿವೃದ್ದಿಗೆ, ಕನ್ನಡ ಭಾಷಿಕರ ಸಾಂವಿಧಾನಿಕ ಹಕ್ಕಿನ ಸಂರಕ್ಷಣೆಗೆ ಕಟಿಬದ್ದವಾಗಿದೆ ಎಂದು ತಿಳಿಸಿದರು.
ಎಲ್.ಡಿ.ಎಫ್ ಅಭ್ಯರ್ಥಿಯ ಪರವಾಗಿ ಪಾಲ್ಗೊಂಡು ಮಾತನಾಡಿದ ಯಾಕೂಬ್ ಮೊಯ್ದೀನ್ ಅವರು, ಮಂಜೇಶ್ವರ ಕ್ಷೇತ್ರದ ಅಭಿವೃದ್ದಿಯ ಹಿನ್ನಡೆಗೆ ಇನ್ನಾದರೂ ತುರ್ತು ಆಡಳಿತಾತ್ಮಕ ಬದಲಾವಣೆಗಳು ಆಗಬೇಕು. ನಾಡು ನುಡಿಯ ರಕ್ಷಣೆಯ ಜೊತೆಗೆ ಜನಸಾಮಾನ್ಯರ ಅಗತ್ಯ ಸೇವೆಗಳಿಗೆ ಪಕ್ಷ ನಿರಂತರ ಚಟುವಟಿಕೆಗೆ ನಡೆಸುವುದು ಎಂದು ತಿಳಿಸಿದರು.
ಬಳಿಕ ಅಭ್ಯರ್ಥಿಗಳೊಂದಿಗೆ ಸಂವಾದದಲ್ಲಿ ಎಚ್.ಲಕ್ಷ್ಮಣ್, ದಯಾ ಮಾಸ್ತರ್, ಎಂ.ಎಚ್.ಜನಾರ್ದನ, ನ್ಯಾಯವಾದಿ ಥೋಮಸ್ ಡಿಸೋಜ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರು, ಕನ್ನಡಿಗರು, ಕನ್ನಡ ಹೋರಾಟ ಸಮಿತಿ ಕನ್ನಡಪರವಾಗಿ ಪ್ರತಿಬಿಂಬಗೊಳ್ಳುವ ಅಭ್ಯರ್ಥಿಗಳನ್ನು ಪಕ್ಷಬೇಧ ಮರೆತು ಚುನಾಯಿಸುತ್ತದೆ. ಆದರೆ ಜಯಶಾಲಿಗಳಾದ ಬಳಿಕ ಕನ್ನಡಿಗರನ್ನು ಮರೆಯದೆ, ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸುವ ಮತ್ತು ನ್ಯಾಯಯುತವಾಗಿ ಕನ್ನಡಿಗರಿಗೆ ಲಭ್ಯವಾಗಬೇಕಾದ ಸೌಲಭ್ಯ, ಕಾನೂನುಗಳ ಅನುಷ್ಠಾನಕ್ಕೆ ಮುಂದಾಗಬೇಕೆಂಬುದು ಕಳಕಳಿ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಗುರುತಿಸಲಾದ ಸುಮಾರು 20 ಅಂಶಗಳ ಬೇಡಿಕೆಗಳನ್ನು ಅಭ್ಯಥಿಗಳ ಮುಂದಿಡುತ್ತಿದ್ದು ಈ ಬಗ್ಗೆ ನಿಸ್ಸಂಶಯವಾಗಿ ಪರಿಹಾರವೊದಗಿಸುವ ಸನ್ಮನಸ್ಸು ಮುಂದಿನ ಶಾಸಕರಾಗುವಲ್ಲಿ ಇರಲಿ ಎಂದರು.
ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ನಿರೂಪಿಸಿರು. ನಿವೃತ್ತ ಮುಖ್ಯೋಪಾಧ್ಯಾಯ ಎಂ.ವಿ.ಮಹಾಲಿಂಗೇಶ್ವರ ಭಟ್ ವಂದಿಸಿದರು.