ಕೋಝಿಕ್ಕೋಡ್: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ಲಸ್ ಟು ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಲ್ಯಾಬ್ ನಲ್ಲಿರುವ ಪ್ರತಿಯೊಂದು ಉಪಕರಣವನ್ನು ವಿದ್ಯಾರ್ಥಿಗಳು ಆಗಾಗ್ಗೆ ಬಳಸುವುದರಿಂದ ರೋಗದ ಹರಡುವಿಕೆಗೆ ಹೆಚ್ಚು ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ಏಪ್ರಿಲ್ 28 ರಿಂದ ಪ್ರಾರಂಭವಾಗಲಿವೆ.
ಈ ಶೈಕ್ಷಣಿಕ ವರ್ಷದ ಬಹುಪಾಲು ಆನ್‍ಲೈನ್ ತರಗತಿಗಳಾಗಿದ್ದರಿಂದ, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಮತ್ತು ವಿಜ್ಞಾನ ವಿಷಯಗಳಲ್ಲಿ ಪ್ರಾಯೋಗಿಕ ಅಧ್ಯಯನ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ಈ ಬಾರಿ ಪ್ರಾಯೋಗಿಕ ಪರೀಕ್ಷೆಗಳು ಅಪ್ರಸ್ತುತ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೇಳುತ್ತಾರೆ. ಪ್ರತಿ ಶಾಲೆಗೆ ಸೂಕ್ಷ್ಮದರ್ಶಕ, ಕಂಪ್ಯೂಟರ್ ಮೌಸ್ ಮತ್ತು ಇತರ ಲ್ಯಾಬ್ ಉಪಕರಣಗಳನ್ನು ಸಾಮೂಹಿಕವಾಗಿ ಬಳಸಬೇಕಾಗುತ್ತದೆ. ಬಳಕೆಯ ಬಳಿಕ ಕ್ರಿಮಿನಾಶಗೊಳಿಸುವುದು ಮತ್ತು ಅದನ್ನು ಇತರ ವಿದ್ಯಾರ್ಥಿಗಳಿಗೆ ರವಾನಿಸುವುದು ಅಪ್ರಾಯೋಗಿಕವಾಗಿದೆ. ಆದ್ದರಿಂದ, ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಲಾಗಿದೆ.
ಪ್ರಾಯೋಗಿಕ ಪರೀಕ್ಷೆಯು ಜೀವಶಾಸ್ತ್ರ್ರ ವಿದ್ಯಾರ್ಥಿಗಳಿಗೆ ಐದು ವಿಷಯಗಳಲ್ಲಿ ಮತ್ತು ಇತರ ವಿಜ್ಞಾನ ವಿದ್ಯಾರ್ಥಿಗಳಿಗೆ ನಾಲ್ಕು ವಿಷಯಗಳಲ್ಲಿರುತ್ತದೆ. ಲ್ಯಾಬ್ ನಲ್ಲಿ ಏಕಕಾಲದಲ್ಲಿ 15 ವಿದ್ಯಾರ್ಥಿಗಳ ತಂಡ ಇರುತ್ತದೆ. ಶಿಕ್ಷಕರು ಸಹ ಪ್ರಯೋಗಾಲಯದಲ್ಲಿರುತ್ತಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಿಕಟ ಸಂಪರ್ಕ ಏರ್ಪಡುತ್ತದೆ. ಕೊರೋನಾ ಹರಡುವಿಕೆಯನ್ನು ಹೆಚ್ಚಿಸುವ ಸಾಮಥ್ರ್ಯ ಇರುವುದರಿಂದ ಸೋಂಕಿನ ಪ್ರಮಾಣ ಕಡಿಮೆಯಾದ ಬಳಿಕ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಬಹುದು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.