ತಿರುವನಂತಪುರ: ಮಾರಕ ಕೊರೋನ ಬಾಧಿಸಿದವರು ಬಳಿಕ ತೀವ್ರ ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ ಎಂದು ನಟ ಮಣಿಯನ್ ಪಿಳ್ಳೈ ರಾಜು ಹೇಳಿದ್ದಾರೆ. ಅವರು ಈ ಹಿಂದೆ ಕೊರೊನಾ ಬಾಧಿತರಾಗಿ ಇದೀಗ ಗುಣಮುಖರಾಗಿದ್ದು ಆದರೆ ಈಗ ತಮ್ಮ ಧ್ವನಿಯನ್ನು ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ.
ಅವರು ಕೊರೊನಾ ಬಾಧಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದವರು ಕಳೆದ ತಿಂಗಳು 25 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಮಾತನಾಡಲು ಕಷ್ಟಪಡಬೇಕಾಯಿತು. ರಾಜು ಅವರ ಪರಿಚಿತ ಧ್ವನಿಯ ಬದಲು, ಇನ್ನೇನೋ ಕೇಳಿಬಂದಿತ್ತು. ಕ್ರಮೇಣ ಧ್ವನಿ ಮತ್ತೆ ಸುಸ್ಥಿತಿಗೆ ಬಂದಿದೆ. ಈಗ 70 ಪ್ರತಿಶತ ಹಳೆಯ ಶಬ್ದವಾಗಿ ಮಾರ್ಪಟ್ಟಿದೆ ಎಂದು ಸ್ವತಃ ಅವರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಾಜು ಕೊರೋನಾ ಬಾರದಂತೆ ಬಹಳ ಎಚ್ಚರಿಕೆಯಿಂದ ಇದ್ದರು. ಆದರೆ, ಫೆಬ್ರವರಿ 26 ರಂದು ಅವರು ಹಾಡನ್ನು ರೆಕಾರ್ಡ್ ಮಾಡಲು ಕೊಚ್ಚಿಗೆ ಹೋದಾಗ ಸೋಂಕಿಗೆ ತುತ್ತಾದರು. ಕೆ.ಬಿ. ಗಣೇಶ್‍ಕುಮಾರ್ ಅವರೂ ಅವರ ಜೊತೆಗಿದ್ದರು. ಮರುದಿನ ಗಣೇಶ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಎರಡೇ ದಿನಗಳಲ್ಲಿ ರಾಜು ಅವರಿಗೂ ತಲೆನೋವು ಮತ್ತು ಕೆಮ್ಮು ಕಾಡಲಾರಂಭಿಸಿತು. ಬಳಿಕ ನಡೆದ ಪರೀಕ್ಷೆಯಲ್ಲಿ ಕೊರೋನಾ ದೃಢಪಡಿಸಲಾಯಿತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ಅವರಿಗೆ ನ್ಯುಮೋನಿಯಾ ಕಾಯಿಲೆ ಇತ್ತು. ಆ ಸಂದರ್ಭ ಧ್ವನಿ ಕಳೆದುಕೊಂಡರು. ಅವರು 18 ದಿನ ಆಸ್ಪತ್ರೆಯಲ್ಲಿದ್ದರು. ಈಗ ಮನೆಗೆ ಹಿಂತಿರುಗಿದ್ದು ತೀವ್ರ ನಿತ್ರಾಣತೆಯಿಂದ ಬಳಲುತ್ತಿದ್ದಾರೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಿದ ಬೆಂಬಲಕ್ಕೆ ವೈದ್ಯರು ಮತ್ತು ಪಾಲಕರಿಗೆ ಮಣಿಯನ್ ಪಿಳ್ಳೈ ರಾಜು ಧನ್ಯವಾದ ಅರ್ಪಿಸಿದ್ದಾರೆ.