ಹರಿದ್ವಾರ: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕುಂಭಮೇಳ ಸಾಂಕೇತಿಕವಾಗಿರಲಿ ಎಂಬ ಪ್ರಧಾನಿ ಮೋದಿ ಮನವಿಗೆ ಸ್ಪಂಧಿಸಿರುವ ಸ್ವಾಮೀಜಿಗಳು ಉತ್ತರಾಖಂಡ ಮಹಾ ಕುಂಭಮೇಳಕ್ಕೆ ತೆರೆ ಎಳೆದಿದ್ದಾರೆ.
ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 12 ವರ್ಷಗಳಿಗೊಮ್ಮೆ ಆಚರಿಸುವ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದೀಗ ಪ್ರಧಾನಿ ಮನವಿಗೆ ಸ್ಪಂದಿಸಿರುವ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಯಕ್ಷ ಸ್ವಾಮಿ ಅವಧೇಶಾನಂದ್ ಗಿರಿ ಜಿ ಮಹಾರಾಜ್ ಕುಂಭಮೇಳಕ್ಕೆ ತೆರೆ ಎಳೆದಿದ್ದಾರೆ. ಕೊರೋನಾ ಕಾರಣ ಕುಂಭಮೇಳ ಅಂತ್ಯಗೊಳಿಸಲು ಮೋದಿ, ದೂರವಾಣಿ ಮೂಲಕ ಜುನಾ ಅಖಾಡದ ಮುಖ್ಯಸ್ಥ ಅವಧೇಶಾನಂದ್ ಜೊತೆ ಮಾತುಕತೆ ನಡೆಸಿದ್ದರು. ಇದೀಗ ಅವಧೇಶಾನಂದ್ ಗಿರಿ ಜಿ ಮಹಾರಾಜ್ ಕುಂಭಮೇಳ ಅಂತ್ಯಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
'ಭಾರತದ ಜನರು ಮತ್ತು ಅವರ ಉಳಿವು ನಮ್ಮ ಮೊದಲ ಆದ್ಯತೆಯಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಏಕಾಏಕಿ ಉಲ್ಬಣ, ಕುಂಭದ ಸಂದರ್ಭದಲ್ಲಿ ಆಹ್ವಾನಿಸಲಾದ ಎಲ್ಲಾ ದೇವತೆಗಳನ್ನು ನಾವು ನೀರಿನಲ್ಲಿ ಬಿಟ್ಟಿದ್ದೇವೆ. ಇದು ಜುನಾ ಅಖಾಢದ ಪರವಾಗಿ ಕುಂಭದ ಔಪಚಾರಿಕ ತೀರ್ಮಾನವಾಗಿದೆ. ಅಂತೆಯೇ 2021 ರ ಹರಿದ್ವಾರ ಕುಂಭಮೇಳವನ್ನು ಅಂತ್ಯಗೊಳಿಸುವಂತೆ ನಾವು ಎಲ್ಲಾ ತೀರ್ಥ ಮತ್ತು ಸಿದ್ಧ ಪೀಠಗಳಿಗೆ ಮನವಿ ಮಾಡುತ್ತೇವೆ. ಅಲ್ಲದೆ ಕೊರೋನಾ ವೈರಸ್ ಪರಿಸ್ಥಿತಿಯನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಆದ್ದರಿಂದ ಭಾವನಾತ್ಮಕ ಭಕ್ತರಿಗೆ ನನ್ನ ಮನವಿ ಎಂದರೆ ಅವರು ಕುಂಭ ಮೇಳದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಾಗವಹಿಸಬೇಕು. ಬೈರಾಗಿಗಳು ತಮ್ಮ ‘ಶಾಹಿ ಸ್ನಾನ’ ಮಾಡಲೇಬೇಕು. ಅದನ್ನು ಸಂಘಟಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಆದರೆ ನನ್ನ ವೈಯಕ್ತಿಕ ಮನವಿಯೆಂದರೆ, ಮಾನವೀಯತೆಗಾಗಿ ಈ ವಿಷಯಗಳನ್ನು ಸೀಮಿತ ಮತ್ತು ಸಾಂಕೇತಿಕವಾಗಿ ಇಡಬೇಕು ಎಂದು ಹೇಳಿದ್ದಾರೆ.
ನಮ್ಮ ಅಖಾಡದ ಕೋವಿಡ್ -19 ಪರೀಕ್ಷೆಗೆ ಒಳಪಡುವ ಬೈರಾಗಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ, ಈ ಪೈಕಿ ಒಬ್ಬರು ಅಥವಾ ಇಬ್ಬರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ನಾನೂ ಕೂಡ 12 ಬಾರಿ ಪರೀಕ್ಷೆಗೊಳಗಾಗಿದ್ದೆ ಎಂದು ಜುನಾ ಅಖಾಡದ ಮುಖ್ಯಸ್ಥ ಅವಧೇಶಾನಂದ್ ಹೇಳಿದ್ದಾರೆ.
ಹರಿದ್ವಾರ ಕುಂಭಮೇಳ ಪ್ರದೇಶದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಜನರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭಮೇಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಏಪ್ರಿಲ್ 12 ರಂದು ಸೋಮವತಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆದ ಕೊನೆಯ ಎರಡು ಶಾಹಿ ಸ್ನಾನಗಳಲ್ಲಿ ('ಶಾಹಿ ಸ್ನಾನ್') ಭಾಗವಹಿಸಿದ 48.51 ಲಕ್ಷ ಜನರಲ್ಲಿ ಏಪ್ರಿಲ್ 14 ರಂದು ಮೆಶ್ ಸಂಕ್ರಾಂತಿ ವೇಳೆ ಪಾಲ್ಗೊಂಡಿದ್ದ ಬಹುಪಾಲು ಮಂದಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಇದು ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು.
ಸ್ವತಃ ಅಖಿಲ್ ಭಾರತೀಯ ಅಖರಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರೂ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿ ರಿಷಿಕೇಶ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಮಧ್ಯಪ್ರದೇಶದ ಮಹಾ ನಿರ್ವಾಣಿ ಅಖಾಡದ ಮಹಾಮಂಡಲೇಶ್ವರ ಅವರೂ ಕೂಡ ಸೋಂಕಿಗೆ ತುತ್ತಾಗಿ ಡೆಹ್ರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ ಸೋಂಕಿಗೆ ತುತ್ತಾಗಿದ್ದ ಸ್ವಾಮಿ ಕಪಿಲ್ ದೇವ್ ಅವರು ಏಪ್ರಿಲ್ 13 ರಂದು ನಿಧನರಾಗಿದ್ದರು. ಈ ಬೆಳವಣಿಗೆಗಳು ಮಹಾ ಕುಂಭಮೇಳದ ಮೇಲೆ ಕಪ್ಪು ಛಾಯೆ ಮೂಡಿಸಿದ್ದವು.