ನವದೆಹಲಿ: ಒಂಭತ್ತು ವರ್ಷಗಳ ಹಿಂದೆ,2012ರಲ್ಲಿ ಇಟಲಿ ನೌಕಾಪಡೆ ಸಿಬ್ಬಂದಿಗಳಿಂದ ಕೇರಳದ ಇಬ್ಬರು ಮೀನುಗಾರರ ಹತ್ಯೆ ಪ್ರಕರಣವನ್ನು ಶೀಘ್ರ ಮುಕ್ತಾಯಗೊಳಿಸುವಂತೆ ಕೇಂದ್ರವು ಮನವಿ ಮಾಡಿಕೊಂಡಿದ್ದರೂ ಸರಕಾರವು ನ್ಯಾಯಾಲಯದಲ್ಲಿ ಪರಿಹಾರದ ಹಣವನ್ನು ಇನ್ನೂ ಠೇವಣಿಯಿರಿಸದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಿತು. ಪರಿಹಾರದ 10 ಕೋ.ರೂ.ಗಳನ್ನು ಠೇವಣಿಯಿರಿಸಿದರೆ ಮಾತ್ರ ಇಬ್ಬರು ಇಟಲಿ ನೌಕಾಪಡೆ ಯೋಧರ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹಾಡುವುದಾಗಿ ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಸ್ಪಷ್ಟಪಡಿಸಿತ್ತು.
ವಿಚಾರಣೆ ಸಂದರ್ಭ,ಸರ್ವೋಚ್ಚ ನ್ಯಾಯಾಲಯದಲ್ಲಿ ಹಣವನ್ನು ಠೇವಣಿಯಿರಿಸಿದ್ದಕ್ಕೆ ಯಾವುದೇ ಪುರಾವೆಯಿಲ್ಲ,ಏಕೆ ಎಂಬ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ಪ್ರಶ್ನೆಗೆ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, 'ಇಟಲಿ ಸರಕಾರವು ಹಣವನ್ನು ಭಾರತಕ್ಕೆ ವರ್ಗಾಯಿಸಿದೆ, ಆದರೆ ಅದನ್ನು ನಾವಿನ್ನೂ ಸ್ವೀಕರಿಸಬೇಕಿದೆ. ಹಣ ನಮ್ಮ ಕೈಸೇರಿದ ತಕ್ಷಣ ನ್ಯಾಯಾಲಯದಲ್ಲಿ ಠೇವಣಿಯಿರಿಸುತ್ತೇವೆ ' ಎಂದು ಉತ್ತರಿಸಿದರು.
'ವಿಚಾರಣೆಯನ್ನು ನಂತರ ನಡೆಸುವುದಾಗಿ ನಾವು ಮೊದಲೇ ಹೇಳಿದ್ದೆವು,ಆದರೆ ಸರಕಾರವು ಶೀಘ್ರ ವಿಚಾರಣೆಗೆ ಒತ್ತಾಯಿಸಿತ್ತು. ನಮಗೆ ಇವೆಲ್ಲ ಅನುಭವವಿದೆ. ನೀವು (ಕೇಂದ್ರ) ಎಷ್ಟು ಚುರುಕಾಗಿ ಕೆಲಸ ಮಾಡುತ್ತೀರಿ ಎನ್ನುವುದು ನಮಗೆ ಗೊತ್ತಿದೆ'ಎಂದು ಹೇಳಿದ ನ್ಯಾ.ಬೋಬ್ಡೆ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಿದರು.
ಮೃತರ ಕುಟುಂಬಗಳು ಪರಿಹಾರವನ್ನು ಪಡೆಯಲು ಒಪ್ಪಿಕೊಂಡಿವೆ ಎಂದು ಕೇಂದ್ರವು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ಉಭಯ ಸರಕಾರಗಳ ನಡುವೆ ತುರ್ತು ವಿಷಯವಿರುವುದರಿಂದ ವಿಚಾರಣೆಯನ್ನು ಇಂದೇ ಕೈಗೆತ್ತಿಕೊಳ್ಳುವಂತೆ ಮೆಹ್ತಾ ಪೀಠವನ್ನು ಕೋರಿಕೊಂಡಿದ್ದರು.
ಹತ್ಯೆ ಆರೋಪಿಗಳಾದ ಸಾಲ್ವಾತೋರ್ ಗಿರೋನೆ ಮತ್ತು ಮ್ಯಾಸ್ಸಿಮಿಲಾನೊ ಲಾಟೋರೆ ಅವರ ವಿಚಾರಣೆ ಇಟಲಿಯಲ್ಲೇ ನಡೆಯಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಧಿಕರಣವೊಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲು ಕೇಂದ್ರವು ಬಯಸಿತ್ತು. ಮೃತರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸುವಂತೆಯೂ ನ್ಯಾಯಾಧಿಕರಣವು ಆದೇಶಿಸಿತ್ತು.