ತಿರುವನಂತಪುರ: ಪ್ರಸ್ತುತ ಲಸಿಕೆಗಳು ಕೋವಿಡ್ ವಿರುದ್ಧ ಹೋರಾಡಲು ಅಸಮರ್ಥವಾಗಿದೆಯೇ? ಲಸಿಕೆಯ ಎರಡು ಡೋಸ್ ಪಡೆದ ಬಳಿಕವೂ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅನುಮಾನಗಳು ದೃಢಗೊಳ್ಳುತ್ತಿವೆ.
ಎರ್ನಾಕುಳಂನಲ್ಲಿ ಇಂತಹ ಪ್ರಕರಣಗಳು ಅತಿ ಹೆಚ್ಚು ವರದಿಯಾಗಿವೆ. ಪತ್ತನಂತಿಟ್ಟದಲ್ಲಿ 60 ಜನರು ಬಾಧಿತರಾಗಿದ್ದಾರೆ. ಲಸಿಕೆ ತೆಗೆದುಕೊಂಡ ನಂತರವೂ ಕಾಳಜಿ ವಹಿಸಬೇಕು ಎಂಬ ಸ್ಪಷ್ಟ ಸೂಚನೆ ಇದು ಎಂದು ತಜ್ಞರು ಹೇಳುತ್ತಾರೆ. ಕೋವಿ ಶೀಲ್ಡ್ ಮತ್ತು ಕೋವಾಕ್ಸಿನ್ ಜೊತೆಗೆ, ಆಕ್ಸ್‍ಫರ್ಡ್ ಮತ್ತು ಸಿನೊಫಾರ್ಮ್ ಲಸಿಕೆಗಳನ್ನು ಪಡೆದ ಜನರಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ.
ಪತ್ತನಂತಿಟ್ಟದಲ್ಲಿ, ಮರಳಿ ಕೋವಿಡ್ ಬಾಧಿತರಾದವರಲ್ಲಿ 44 ರೋಗಿಗಳು ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದರು. ಕೋವಾಕ್ಸಿನ್ ಪಡೆದ ಹತ್ತು ಜನರು, ಸಿನೊಫಾರ್ಮ್ ಲಸಿಕೆ ತೆಗೆದುಕೊಂಡ ಐದು ಜನರು ಮತ್ತು ಆಕ್ಸ್‍ಫರ್ಡ್ ಲಸಿಕೆ ತೆಗೆದುಕೊಂಡ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಎರಡು ವಾರಗಳ ಬಳಿಕ ಎರಡನೇ ಡೋಸ್ ತೆಗೆದುಕೊಂಡ ಜನರಲ್ಲಿ ಸೋಂಕು ದೃಢಪಟ್ಟಿದೆ. ಅವರಲ್ಲಿ ಹೆಚ್ಚಿನವರು ಆರೋಗ್ಯ ಕಾರ್ಯಕರ್ತರು.
ಏತನ್ಮಧ್ಯೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಮುಂದುವರಿದಿದೆ. ಖಾಸಗಿ ಆಸ್ಪತ್ರೆಗಳನ್ನು ಒಳಗೊಂಡಂತೆ ಲಸಿಕೆ ನಿಲ್ಲಿಸಲಾಗಿದೆ. ತಿರುವನಂತಪುರದ 188 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಪ್ರಸ್ತುತ ಕೇವಲ 34 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಮಧ್ಯೆ ಎರಡು ಲಕ್ಷ ಡೋಸ್ ಲಸಿಕೆಗಳು ನಿನ್ನೆ ರಾಜ್ಯಕ್ಕೆ ರವಾನೆಯಾಗಿದ್ದು ಅಲ್ಪ ಸಮಾಧಾನ ತಂದಿದೆ.