ಕೊಚ್ಚಿ : ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಪಕ್ಷಿಗಳ ಆವಾಸ ವ್ಯವಸ್ಥೆಯಲ್ಲಿ ಕಗ್ಗಲ್ಲು ಕೋರೆಗೆ ಅನುಮತಿ ನೀಡುವುದರಿಂದ ಆ ಪ್ರದೇಶದ ಜೈವ ವೈವಿಧ್ಯತೆ ಸಂಪೂರ್ಣ ನಾಶವಾಗಲಿದೆ ಎಂದು ರಾಜ್ಯ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕಿದೂರು ಪಕ್ಷಿ ಗ್ರಾಮ ಕ್ಕೆ ಕೇವಲ 350ಮೀ ದೂರದ ಕಾಜೂರಿನಲ್ಲಿ ಕಗ್ಗಲ್ಲು ಕೋರೆ ಪ್ರಾರಂಭಿಸಲು ಅನಂತಪುರದ ಖಾಸಗಿ ಕಂಪೆನಿಯೊಂದು ಕಳೆದ ನಾಲ್ಕು ವರ್ಷಗಳಿಂದ ಸತತ ಪ್ರಯತ್ನ ನಡೆಸಿತ್ತು.ಎಲ್ಲಾ ದಾಖಲೆ ಪತ್ರಗಳೊಂದಿಗೆ ಸ್ಫೋಟಕ ಸಂಗ್ರಹಕ್ಕೆ ಸಲ್ಲಿಸಿದ ಅರ್ಜಿಯನ್ನು ಜಿಲ್ಲಾಧಿಕಾರಿ ತಡೆ ಹಿಡಿದಿದ್ದರು.ಈ ಕ್ರಮವನ್ನು ಪ್ರಶ್ನಿಸಿ ಕಂಪೆನಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.ಇದೀಗ ಅಲ್ಲಿಯೂ ಕಂಪೆನಿಯ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ.
ಅಡಿಕೆ,ತರಕಾರಿ ಹಾಗೂ ಭತ್ತದ ಕೃಷಿಗೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾದ ಕಾಜೂರು ಬಯಲು ಈ ಮೊದಲು ಅನಧಿಕೃತ ಕಗ್ಗಲ್ಲು ಕೋರೆಯಿಂದ ಹಲವು ತೊಂದರೆಗಳನ್ನು ಅನುಭವಿಸಿತ್ತು.ಅಂದು ಕಾಜೂರು ನಾಗರಿಕರ ಒಮ್ಮತದ ಪ್ರತಿಭಟನೆಯಿಂದ ಕೋರೆ ಕೆಲಸಗಳು
ಸ್ಥಗಿತಗೊಂಡಿದ್ದವು.ಆದರೆ ಇದೀಗ ಕೆಲವು ವರುಷಗಳಿಂದ ಹೊಸ ಕಗ್ಗಲ್ಲು ಕ್ವಾರಿಗಾಗಿ ತೆರೆಮರೆಯ ಯತ್ನ ಮುಂದುವರಿದಿತ್ತು.ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಮುಂದೆ ಕಿದೂರು ಪಕ್ಷಿ ಗ್ರಾಮದ ಪ್ರಸ್ತಾಪವಾಗಿತ್ತು. ಅಲ್ಲದೆ ಕಾಜೂರು ಬಯಲನ್ನು ನಾಮಾವಶೇಷ ಮಾಡುವ ಕಗ್ಗಲ್ಲು ಕ್ವಾರಿಯ ವಿರುಧ್ಧವಾಗಿ ಈಗಿನ ವಾರ್ಡ್ ಸದಸ್ಯರಾದ ಶ್ರೀಮತಿ ಪುಷ್ಪಲತಾ, ಪುಷ್ಪಾವತಿ,ಗೀತ ಮೊದಲಾದವರು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಗಣ್ಯರನ್ನು ಕಂಡು ಮನವಿ ಸಲ್ಲಿಸಿದ್ದರು.
ಈಗಲೂ ಖಾಸಗಿ ಕಂಪೆನಿಗೆ ಹೈಕೋರ್ಟಿನಲ್ಲಿ ಮೇಲ್ಮನವಿ ಮಾಡಲು ಅವಕಾಶವಿರುವುದರಿಂದ ಹಣ ಹಾಗೂ ರಾಜಕೀಯ ಬೆಂಬಲದಿಂದ ಕ್ವಾರಿ ಆರಂಭಿಸಲು ಶತಪ್ರಯತ್ನ ನಡೆಯುವುತ್ತಿರುವುದಾಗಿ ಮಾತುಗಳು ಕೇಳಿ ಬರುತ್ತಿವೆ.