ಬೆಂಗಳೂರು: ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಶಾಸಕ ಸುನಿಲ್ ಕುಮಾರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಕೇರಳ ಬಿಜೆಪಿ ಸಹ ಪ್ರಭಾರಿಯಾಗಿರುವ ಸುನಿಲ್ ಕುಮಾರ್ ಅವರು, ಕಳೆದ 3 ತಿಂಗಳುಗಳಿಂದ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಸುನೀಲ್ ಅವರಿಗೆ ಶುಕ್ರವಾರ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಶಾಸಕರು ಕ್ವಾರಂಟೈನ್‌ನಲ್ಲಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಸುನೀಲ್ ಕುಮಾರ್ ಅವರ ಜೊತೆಗ ತಂಗಿದ್ದ ಸಿಬ್ಬಂದಿಗಳು ಹಾಗೂ ಸಂಪರ್ಕದಲ್ಲಿದ್ದವರೆಲ್ಲರೂ ಸ್ವಯಂಪ್ರೇರಿತರಾಗಿ ಐಸೋಲೇಷನ್ ನಲ್ಲಿದ್ದಾರೆ. ಇನ್ನೂ ಕೆಲ ದಿನಗಳ ಕಾಲ ಸುನೀಲ್ ಕುಮಾರ್ ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದವರಾರೂ ಪ್ರಚಾರ ಕಾರ್ಯದಲ್ಲಿ ತೊಡಗುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೂಡ ಕೇರಳದಲ್ಲಿಯೇ ಇದ್ದು, ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಅಧಿವೇಶನ ಪೂರ್ಣಗೊಂಡ ಬಳಿಕ ರಾಜ್ಯದ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್, ಗಣೇಶ್ ಕಾರ್ನಿಕ್ ಸೇರಿದಂತೆ ಸಾಕಷ್ಟು ನಾಯಕರು ಕೇರಳದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.ಬಿಜೆಪಿ ಶಾಸಕ ರಘುಪತಿ ಭಟ್ ಅವರು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದರೆ, ಇತರೆ ಪಕ್ಷದ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ ಮತ್ತು ರಾಜೇಶ್ ನಾಯಕ್ ಅವರು ಕೇರಳದಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಪ್ರಚಾರ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಕಾಸರಗೋಡು ಕಾರ್ಯಕರ್ತರಿಗೆ ಬೇಡ ಆತಂಕ:
ಈ ನಡುವೆ ಸುನಿಲ್ ಕುಮಾರ್ ಕಾಸರಗೋಡು ಕೇಂದ್ರೀಕರಿಸಿ ಪ್ರಚಾರ ಜವಾಬ್ದಾರಿ ನಿರ್ವಹಿಸಿದ್ದು, ಈ ಹಿನ್ನೆಲೆಯಲ್ಲಿ ಆತಂಕ ಸಹಜ.ಆದರೆ ಅವರು ಕಾರ್ಯಾಲಯ ಕೇಂದ್ರೀಕರಿಸಿ ಮಂಜೇಶ್ವರ,ಕಾಸರಗೋಡು ಕ್ಷೇತ್ರಗಳ ಕಾರ್ಯನಿರ್ವಹಣೆ ಮಾಡಿರುವುದರಿಂದ ಹೆಚ್ಚು ಜನರ ಸಂಪರ್ಕ ಆಗಿಲ್ಲ ಎನ್ನಲಾಗಿದ್ದು, ಆತಂಕ ಬೇಡ ಎಂದು ಪಕ್ಷದ ಮೂಲಗಳು ತಿಳಿಸಿವೆ.