ಉಪ್ಪಳ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ಕೆಲವೆಡೆ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ 73.58 ಶೇ.ಮತದಾನವಾದ ಬಗ್ಗೆ ಪ್ರಾಥಮಿಕ ವರದಿಗಳು ದೃಢಪಡಿಸಿವೆ.
ಈ ಮಧ್ಯೆ ಪೈವಳಿಕೆ ಗ್ರಾ.ಪಂ.ವ್ಯಾಪ್ತಿಯ ಕನಿಯಾಲ ಕಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆಯ ಕೊನೆಯ ಹಂತದಲ್ಲಿ ಆಗಮಿಸಿದ ಏಳು ಮಂದಿ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡದೆ ತೀವ್ರ ಪ್ರತಿಭಟನೆ ಸಂಘರ್ಷಾವಸ್ಥೆ ಸೃಷ್ಟಿಯಾದ ಘಟನೆ ನಡೆದಿದೆ.
ಕನಿಯಾಲ ಶಾಲಾ ಮತಗಟ್ಟೆಗೆ ಮಂಗಳವಾರ ಸಂಜೆ 6.5 ರ ಸುಮಾರಿಗೆ ಆಗಮಿಸಿದ ಏಳು ಮಂದಿ ಮತದಾರರಿಗೆ ಚುನಾವಣಾ ಅಧಿಕಾರಿ ಮತ ಚಲಾಯಿಸಲು ಅವಕಾಶ ನೀಡದ್ದರಿಂದ ಪ್ರತಿರೋಧ ವ್ಯಕ್ತವಾಯಿತು. ವಿಷಯ ತಿಳಿದು ಆಗಮಿಸಿದ ಮಂಜೇಶ್ವರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಮತಗಟ್ಟೆ ಅಧಿಕೃತರಲ್ಲಿ ಮತ ಚಲಾವಣೆಗೆ ಅವಕಾಶ ನೀಡಲು ವಿನಂತಿಸಿದರು. ಆದರೆ ಮನವಿಗೆ ಸ್ಪಂಧಿಸಿದ ಅಧಿಕಾರಿಯ ಕ್ರಮದಿಂದ ಕುಪಿತರಾದ ಸುರೇಂದ್ರನ್ ಮತಗಟ್ಟೆಯ ಎದುರು ಮತದಾರರೊಂದಿಗೆ ಪಿಕೆಟಿಂಗ್ ನಡೆಸಿದರು. ಈ ಮಧ್ಯೆ ಸ್ಥಳೀಯ ಡಿವೈಎಫ್‍ಐ ಪ್ರಮುಖರೂ ಆಗಮಿಸಿ ಮತಗಟ್ಟೆ ಅಧಿಕಾರಿಗೆ ಬೆಂಬಲವಾಗಿ ಮತ ಚಲಾವಣೆಗೆ ಅವಕಾಶ ನೀಡಬಾರದೆಂದು ಪರ್ಮಾನು ಹೊರಡಿಸಿದರೆಂದು ತಿಳಿದುಬಂದಿದೆ. ಇದು ತೀವ್ರ ಸಂಘರ್ಷ ಸ್ಥಿತಿಗೆ ಕಾರಣವಾಗಿದ್ದು ರಾತ್ರಿ 9ರ ವರೆಗೂ ಪಿಕೆಟಿಂಗ್ ಮುಂದುವರಿಯಿತು.