ನವದೆಹಲಿ: ಕೋವಿಡ್-19 ಲಸಿಕೆ 'ಕೋವಿಶೀಲ್ಡ್'ನ ದರವನ್ನು ಮೊದಲು ನಿಗದಿ ಮಾಡಿದ್ದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ನಿಗದಿ ಮಾಡಿರುವುದನ್ನು ಲಸಿಕೆ ತಯಾರಕ ಕಂಪನಿ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಶನಿವಾರ ಸಮರ್ಥಿಸಿಕೊಂಡಿದೆ.
'ಲಸಿಕೆ ತಯಾರಿಸಲು ಆರಂಭದಲ್ಲಿ ತೊಡಗಿಸಿದ್ದ ಬಂಡವಾಳದ ಆಧಾರದ ಮೇಲೆ ಮೊದಲು ದರವನ್ನು ನಿಗದಿ ಮಾಡಲಾಗಿತ್ತು. ಈಗ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಉತ್ಪಾದನಾ ಸಾಮರ್ಥ್ಯವನ್ನು ಹಾಗೂ ಪ್ರಮಾಣವನ್ನು ಹೆಚ್ಚಿಸಲು ಹೂಡಿಕೆಯನ್ನೂ ಹೆಚ್ಚಿಸಬೇಕಾಗಿದೆ' ಎಂದು ಕಂಪನಿ ಹೇಳಿದೆ.
ಪುಣೆ ಮೂಲದ ಎಸ್‌ಐಐ, ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತದೆ. ರಾಜ್ಯಗಳಿಗೆ ಲಸಿಕೆಯ ಪ್ರತಿ ಡೋಸ್ ದರವನ್ನು ₹ 600 ಹಾಗೂ ಹೊಸದಾಗಿ ಖರೀದಿ ಒಪ್ಪಂದ ಮಾಡಿಕೊಳ್ಳುವ ಕೇಂದ್ರ ಸರ್ಕಾರಕ್ಕೆ ₹ 400 ನಿಗದಿ ಮಾಡಿದೆ.
ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಪೂರೈಕೆ ಮಾಡುವ ಲಸಿಕೆಯ ಪ್ರತಿ ಡೋಸ್‌ಗೆ ಕಂಪನಿಯು ₹ 150 ದರ ನಿಗದಿ ಮಾಡಿದೆ.
'ಭಾರತದಲ್ಲಿ ಲಭ್ಯವಿರುವ ಲಸಿಕೆಯ ದರಕ್ಕೂ, ಜಾಗತಿಕವಾಗಿ ನಿಗದಿಯಾಗಿರುವ ದರಕ್ಕೂ ಹೋಲಿಕೆ ಮಾಡುವುದು ಅಸಮರ್ಪಕ. ಕೋವಿಶೀಲ್ಡ್ ಈಗ ದೇಶದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಲಸಿಕೆಯಾಗಿದೆ' ಎಂದೂ ಕಂಪನಿ ಹೇಳಿದೆ.
'ಕೋವಿಡ್-19 ಪ್ರಕರಣಗಳು ತೀವ್ರವಾಗಿ ಹೆಚ್ಚಿ, ಅಪಾಯ ಎದುರಿಸುತ್ತಿದ್ದ ದೇಶಗಳು ಆಗ ಲಸಿಕೆ ಉತ್ಪಾದನೆಗಾಗಿ ಹಣ ತೊಡಗಿಸಿದ್ದವು. ಹೀಗಾಗಿ ಜಾಗತಿಕ ಮಟ್ಟದಲ್ಲಿಯೂ ಲಸಿಕೆಯ ದರವನ್ನು ಕಡಿಮೆ ನಿಗದಿ ಮಾಡಲಾಗಿತ್ತು' ಎಂದಿದೆ.
'ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಆರಂಭವಾದ ಲಸಿಕೆ ಕಾರ್ಯಕ್ರಮಕ್ಕೆ ಕಡಿಮೆ ದರದಲ್ಲಿಯೇ ಕೋವೀಶೀಲ್ಡ್ ಲಸಿಕೆಯನ್ನು ಪೂರೈಸಲಾಗಿತ್ತು' ಎಂದೂ ಕಂಪನಿ ಹೇಳಿದೆ.