ಬೆಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲೂ ರಿಲಯನ್ಸ್ ಫೌಂಡೇಷನ್ ವೈದ್ಯಕೀಯ ಸೇವೆ-ಸವಲತ್ತುಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ನಿರತವಾಗಿದ್ದು, ಕರೊನಾ ಕಗ್ಗಂಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಅದು ತನ್ನ ಸೇವೆಯನ್ನೂ ಮುಂದುವರಿಸಿದೆ. ಈ ಕುರಿತು ರಿಲಯನ್ಸ್ ಫೌಂಡೇಷನ್ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಮಾಹಿತಿ ನೀಡಿದ್ದಾರೆ.
ಮುಂಬೈನಾದ್ಯಂತ ಸರ್ ಎಚ್ಎನ್ ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ 875 ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಮಾತ್ರವಲ್ಲ ಪ್ರತಿನಿತ್ಯ ಗುಜರಾತ್, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ದಾಮನ್, ದಿಯು ಮತ್ತು ನಗರ್ ಹವೇಲಿಗಳಿಗೆ ರಿಲಯನ್ಸ್ ಫೌಂಡೇಷನ್ ಕಡೆಯಿಂದ 700 ಎಂಟಿ ಆಕ್ಸಿಜನ್ ಉಚಿತವಾಗಿ ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಕರೊನಾ ಕಗ್ಗಂಟು ಮುಂದುವರಿದಿದ್ದು, ಈ ಸಂದರ್ಭದಲ್ಲಿ ನಾವು ಭಾರತೀಯರಾಗಿ ಮುಂಬೈ ಹಾಗೂ ಭಾರತದ ಜನತೆ ಜತೆ ಇದ್ದೇವೆ. ಜನರ ಸೇವೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಎಂದಿನಂತೆ ಇನ್ನೂ ಮುಂದೆಯೂ ಬದ್ಧರಾಗಿಯೇ ಇರುತ್ತೇವೆ ಎಂಬುದಾಗಿ ಹೇಳಿರುವ ನೀತಾ ಅಂಬಾನಿ, 'ಕರೊನಾ ಸೋಲುತ್ತೆ, ಭಾರತ ಗೆಲ್ಲುತ್ತೆ' ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.