ಗುವಾಹಟಿ: ಕೇವಲ 90 ನೋಂದಾಯಿತ ಮತದಾರರನ್ನು ಹೊಂದಿರುವ ಅಸ್ಸಾಂ ರಾಜ್ಯದ ದಿಮಾ ಹಸಾವೊ ಜಿಲ್ಲೆಯ ಮತಗಟ್ಟೆಯಲ್ಲಿ 171 ಮತಗಳನ್ನು ಚಲಾಯಿಸಲಾಗಿದೆ ಎಂದು ಚುನಾವಣಾ ಆಯೋಗ ಪತ್ತೆ ಹಚ್ಚಿದ ನಂತರ ಆರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಪ್ರಿಲ್ 1 ರಂದು ಎರಡನೇ ಹಂತದ ಮತದಾನ ನಡೆದಿರುವ ಹಫ್ಲಾಂಗ್ ಕ್ಷೇತ್ರದಲ್ಲಿ ಈ ಮತಗಟ್ಟೆ ಇದೆ. 2016 ರಲ್ಲಿ ಬಿಜೆಪಿಯ ಬಿರ್ ಭದ್ರಾ ಹಗ್ಜೆರ್ ಅವರು ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದು, ಇಲ್ಲಿ ಶೇಕಡಾ 74 ರಷ್ಟು ಮತದಾನವಾಗಿದೆ.
ಮುಖ್ಯ ಕೇಂದ್ರಕ್ಕೆ ಸಹಾಯಕ ಮತದಾನ ಕೇಂದ್ರವಾಗಿದ್ದ ಈ ಬೂತ್‌ಗೆ ಮರು-ಮತದಾನ ಆದೇಶ ಹೊರಡಿಸಲು ಚುನಾವಣಾ ಆಯೋಗ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ಆದೇಶವನ್ನು ಇನ್ನಷ್ಟೇ ಹೊರಡಿಸಬೇಕಿದೆ.
ಗ್ರಾಮದ ಮುಖ್ಯಸ್ಥರು ಮತದಾರರ ಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿದ ಪರಿಣಾಮವಾಗಿ ಅಕ್ರಮ ಮತದಾನವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಚುನಾವಣಾ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಹಳ್ಳಿಯ ಮುಖ್ಯಸ್ಥರು ಮತದಾರರ ಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿದರು ಹಾಗೂ ತಮ್ಮದೇ ಆದ ಪಟ್ಟಿಯನ್ನು ತಂದರು. ನಂತರ, ಆ ಪಟ್ಟಿಯ ಪ್ರಕಾರ ಹಳ್ಳಿಯ ಜನರು ಮತ ಚಲಾಯಿಸಿದರು. ಈ ಸಮಯದಲ್ಲಿ, ಅಮಾನತುಗೊಂಡ ಅಧಿಕಾರಿಗಳು ಗ್ರಾಮದ ಮುಖ್ಯಸ್ಥರ ಬೇಡಿಕೆಯನ್ನು ಏಕೆ ಮನ್ನಿಸಿದರು ಅಥವಾ ಆ ಸಮಯದಲ್ಲಿ ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇದ್ದರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.