ಕೋಲ್ಕತ್ತ: ಕಾದಿರಿಸಿದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಜತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಮನೆಯಲ್ಲಿ ತಂಗಿದ್ದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉತ್ತರ ಉಲುಬೆಡಿಯಾ ವಿಧಾನಸಭೆ ಕ್ಷೇತ್ರದ ಸೆಕ್ಟರ್ 17ರ ಅಧಿಕಾರಿ ತಪನ್ ಸರ್ಕಾರ್ ಅವರು ತಮ್ಮ ಸಂಬಂಧಿಕರೂ ಆಗಿರುವ ಟಿಎಂಸಿ ನಾಯಕನ ಮನೆಗೆ ಮತಯಂತ್ರಗಳ ಸಹಿತ ತೆರಳಿ ಅಲ್ಲೇ ತಂಗಿದ್ದರು. ಇದು ಚುನಾವಣಾ ಆಯೋಗದ ಸೂಚನೆಗಳ ಉಲ್ಲಂಘನೆಯಗಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿರುವುದಾಗಿ 'ಎಎನ್‌ಐ' ಟ್ವೀಟ್ ಮಾಡಿದೆ.
ಸೆಕ್ಟರ್ ಅಧಿಕಾರಿ ಜತೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಅಮಾನತಿಗೂ ನಿರ್ದೇಶಿಸಲಾಗಿದೆ. ಅಧಿಕಾರಿ ಜತೆಗಿದ್ದ ಮತಯಂತ್ರಗಳನ್ನು ಮತ್ತು ವಿವಿಪ್ಯಾಟ್‌ಗಳನ್ನು ವಾಪಸ್ ಪಡೆಯಲಾಗಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವುದಿಲ್ಲ ಎಂದು ಆಯೋಗ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಇಂದು (ಮಂಗಳವಾರ) ಮೂರನೇ ಹಂತದ ಮತದಾನ ನಡೆಯುತ್ತಿದೆ. 31 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 205 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 75.8 ಲಕ್ಷ ಮತದಾರರಿದ್ದಾರೆ.
ಅಸ್ಸಾಂನ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂಗಳಿದ್ದ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಮುಕ್ತಾಯವಾದ ಕೆಲವೇ ಗಂಟೆಗಳಲ್ಲಿ ಕಾರು ಪತ್ತೆಯಾಗಿದೆ ಎನ್ನಲಾಗಿತ್ತು.