ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ತಮ್ಮ ಮನೆಗಳಲ್ಲೂ ಮಾಸ್ಕ್ ಧರಿಸಲು ಆರಂಭಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಆದರೆ ಇದನ್ನು ಅನುಸರಿಸಬೇಕಾದರೆ ಕೆಲವು ಸ್ಪಷ್ಟ ಸನ್ನಿವೇಶ ಇರಬೇಕು ಎಂದು ವೈದ್ಯರು ಮತ್ತು ತಜ್ಞರು ಹೇಳುತ್ತಿದ್ದಾರೆ.
"ಕುಟುಂಬದಲ್ಲಿ ಯಾರಿಗಾದರೂ ಕೊರೋನಾ ಪಾಸಿಟಿವ್ ಬಂದಿದ್ದರೆ ಮಾತ್ರ ಮನೆಯಲ್ಲಿರುವ ಎಲ್ಲರೂ ಮಾಸ್ಕ್ ಧರಿಸುವುದು ಬಹಳ ಮುಖ್ಯ, ಏಕೆಂದರೆ ಮನೆಯಲ್ಲಿ ವೈರಸ್ ಇತರರಿಗೆ ಹರಡಬಹುದು" ಎಂದು ರಾಷ್ಟ್ರೀಯ ಕೋವಿಡ್ ಕಾರ್ಯದ ಮುಖ್ಯಸ್ಥರಾಗಿರುವ ನಿತಿ ಆಯೋಗದ ಸದಸ್ಯ(ಆರೋಗ್ಯ) ವಿಕೆ ಪಾಲ್ ಅವರು ಕೋವಿಡ್ ಸ್ಥಿತಿ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
"ನಾವು ಮನೆಯಲ್ಲೂ ಮಾಸ್ಕ್ ಧರಿಸಲು ಪ್ರಾರಂಭಿಸುವ ಸಮಯ ಬಂದಿದೆ ಎಂದು ನಾನು ಹೇಳುತ್ತೇನೆ" ಎಂದು ಅವರು ಹೇಳಿದ್ದಾರೆ, ಇಲ್ಲಿಯವರೆಗೆ, ಸರ್ಕಾರ ಹೊರಗಡೆ ಮಾಸ್ತ್ ಧರಿಸುವ ಬಗ್ಗೆ ಮಾತನಾಡುತ್ತಿತ್ತು. ಆದರೆ ಸೋಂಕು ಈಗ ಮನೆಮನೆಗೂ ವಕ್ಕರಿಸುತ್ತಿರುವುದರಿಂದ ಜನರು ಮನೆಯಲ್ಲಿಯೂ ಧರಿಸಬೇಕು ಎಂದಿದ್ದಾರೆ.
ಕುಟುಂಬದಲ್ಲಿ ಯಾರಿಗಾದರೂ ಪಾಸಿಟಿವ್ ಬಂದಿದ್ದರೆ ಅವರು ಸಂಪೂರ್ಣವಾಗಿ ಪ್ರತ್ಯೇಕವಾಗಿರಬೇಕು ಮತ್ತು ಮನೆಯ ಇತರ ಸದಸ್ಯರೂ ಮನೆಯಲ್ಲಿಯೂ ಮಾಸ್ಕ್ ಧರಿಸಬೇಕು. 'ಇಲ್ಲದಿದ್ದರೆ, ಇದು ಅಪ್ರಾಯೋಗಿಕ ಮತ್ತು ನಿಜವಾಗಿಯೂ ಅಗತ್ಯವಿಲ್ಲ. ಮಾಸ್ಕ್ ಧರಿಸುವಂತೆ ಒತ್ತಿಹೇಳುವುದಕ್ಕಾಗಿ (ಪಾಲ್) ಬಹುಶಃ ಅವರು ಆ ರೀತಿ ಹೇಳಿರಬಹುದು ಎಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಯ ವೈದ್ಯ ಯಾತಿನ್ ಮೆಹ್ತಾ ಅವರು ತಿಳಿಸಿದ್ದಾರೆ.
ಈಗ ಮನೆಯಲ್ಲೂ ಮಾಸ್ಕ್ ಧರಿಸಬೇಕಾದ ಸಮಯ ಬಂದಿದೆ. ಅದರಲ್ಲೂ ನಿಮ್ಮ ಸುತ್ತಮುತ್ತ ಕೊರೋನಾ ಸೋಂಕಿತರು ಇತ್ತರೆ ಮಾಸ್ಕ್ ಧರಿಸಿಕೊಂಡಷ್ಟೂ ನೀವು ಸುರಕ್ಷಿತವಾಗಿರುತ್ತೀರಿ ಎಂದು ನಿನ್ನೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.