ನವದೆಹಲಿ : ಭಾರತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಕೊರೊನಾ ಲಸಿಕೆಗಳನ್ನು ಹೆಚ್ಚಿನ ಮಟ್ಟದಲ್ಲಿ ಪೂರೈಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಇದಾಗ್ಯೂ ಕೆಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ಅಭಾವ ಉಂಟಾಗಿದೆ. ಮತ್ತೊಂದೆಡೆ ಹಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆ ವ್ಯರ್ಥವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ದೇಶದಲ್ಲಿ ಏಪ್ರಿಲ್ 11ರವರೆಗೂ ಹತ್ತು ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದ್ದು, ಇಲ್ಲಿಯವರೆಗೂ ಸುಮಾರು 44 ಲಕ್ಷ ಡೋಸ್‌ಗಳ ಲಸಿಕೆಯನ್ನು ವ್ಯರ್ಥ ಮಾಡಿರುವುದಾಗಿ ತಿಳಿದುಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ, ಭಾರತದಲ್ಲಿ ಇದುವರೆಗೂ ಎಷ್ಟು ಕೊರೊನಾ ಲಸಿಕೆಗಳು ವ್ಯರ್ಥವಾಗಿವೆ ಎಂಬುದರ ಕುರಿತು ವ್ಯಕ್ತಿಯೊಬ್ಬರು ಮಾಹಿತಿ ಕೋರಿದ್ದು, ಅದಕ್ಕೆ ಕೇಂದ್ರ ಸರ್ಕಾರ ಉತ್ತರಿಸಿದೆ.
ಕೊರೊನಾ ಲಸಿಕೆಯನ್ನು ವ್ಯರ್ಥ ಮಾಡುವುದರಲ್ಲಿ ತಮಿಳುನಾಡು ಮೊದಲ ರಾಜ್ಯ ಎನಿಸಿಕೊಂಡಿದೆ. ತಮಿಳುನಾಡಿನಲ್ಲಿ ಇದುವರೆಗೂ 12.10% ಡೋಸ್ ಲಸಿಕೆ ವ್ಯರ್ಥವಾಗಿದೆ. ಹರಿಯಾಣ ಎರಡನೇ ಸ್ಥಾನದಲ್ಲಿದ್ದು, 9.74% ಲಸಿಕೆ ವ್ಯರ್ಥವಾಗಿದೆ. ಪಂಜಾಬ್‌ನಲ್ಲಿ 8.12, ಮಣಿಪುರದಲ್ಲಿ 7.8% ಹಾಗೂ ತೆಲಂಗಾಣ ಐದನೇ ಸ್ಥಾನದಲ್ಲಿದ್ದು, 7.55 % ಲಸಿಕೆ ವ್ಯರ್ಥವಾಗಿರುವುದಾಗಿ ತಿಳಿದುಬಂದಿದೆ.
ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಗೋವಾ, ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದದ್ವೀಪದಲ್ಲಿ ಕೊರೊನಾ ಲಸಿಕೆಗಳು ವ್ಯರ್ಥವಾಗುವ ಪ್ರಮಾಣ ಕಡಿಮೆಯಿದೆ.
ಭಾರತದಲ್ಲಿ ಜನವರಿ 16ರಿಂದ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ.