ಕೊಲ್ಲಂ: ರಸ್ತೆಯ ಮಧ್ಯ ರಸ್ತೆ ವಿಭಾಜಕಗಳನ್ನು ಅಳವಡಿಸುವುದು ಹಳೆಯ ಶೈಲಿ. ಈಗ ವಿದ್ಯುತ್ ಕಂಬಗಳನ್ನು ಅಳವಡಿಸುವ ಕ್ರಮ ಅಲ್ಲಲ್ಲಿ ಜಾರಿಗೊಳ್ಳುತ್ತಿದೆ. ಇಂತಹದೊಂದು ಅದ್ಬುತ ರಚನೆ ಇತ್ತೀಚೆಗೆ ವಿಟ್ಲ ಪರಿಸರದಲ್ಲಿ ವರದಿಯಾಗಿದ್ದ ಬೆನ್ನಿಗೇ ಇದೀಗ ಕೊಲ್ಲಂ ನ ಮಣ್ಣೇ ತುರುತ್ ಪಂಚಾಯತಿಯಲ್ಲಿ ಕಿಬ್ಬಿ ನಿರ್ಮಿಸಿದ ರಸ್ತೆಯಲ್ಲಿ ಇಂತಹದೊಂದು ವಿಲಕ್ಷಣತೆ ವರದಿಯಾಗಿದೆ. ವಿಶೇಷವೆಂದರೆ ಇದೇ ರಸ್ತೆಯ ಎಸ್ ರೀತಿಯ ತಿರುವಿನಿಂದ 200 ಮೀಟರ್ ಅಂತರದಲ್ಲಿ ಇಂತಹ ವಿಶಿಷ್ಟ ನಿರ್ಮಾಣ ನಡೆಸಲಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದ ಕಾಮಗಾರಿ ಭಾರೀ ಪ್ರತಿಭಟನೆಯ ಬಳಿಕ ಗುತ್ತಿಗೆದಾರನು ಕೊನೆಗೂ ಕಾಮಗಾರಿ ಕೈಗೊಂಡಿದ್ದು ಅದೂ ರಸ್ತೆಯ ಮಧ್ಯೆ ಇದ್ದ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ಎಂಬುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಕಿಫ್ಬಿ ನಿಧಿಯಿಂದ 24 ಕೋಟಿ ರೂ.ಗಳ ಟೆಂಡರ್ ನೀಡಿ ಕುಂಡÀರಾ- ಮಣ್ಣೇ ತುರತ್ ರಸ್ತೆಯ ನಿರ್ಮಾಣವನ್ನು ಪ್ರಾರಂಭಿಸಲಾಯಿತು.
ಆರು ತಿಂಗಳ ಹಿಂದೆ ಕಾಮಗಾರಿ ಪೂರ್ವ ಲೆಕ್ಕಾಚಾರದ ವೇಳೆ ರಸ್ತೆ ಕಿರಿದಾಗಿರುವುದು ಗಮನಿಸಿ ರಸ್ತೆ ಅಗಲೀಕರಣ ನಡೆಸಲಾಗಿತ್ತು. ಈ ವೇಳೆ ಹಳೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಅಗಲೀಕರಣಗೊಂಡಾಗ ಮಧ್ಯ ಭಾಗಕ್ಕೆ ಬರುತ್ತಿದೆ ಎಂದು ಸಾಮಾನ್ಯ ಜ್ಞಾನವಿರುವ ಯಾರಾದರೂ ಅರ್ಥಮಾಡಿಕೊಳ್ಳುತ್ತಿದ್ದರು. ಆದರೆ ಗುತ್ತಿಗೆದಾರ ಹೇಳುವಂತೆ ವಿದ್ಯುತ್ ಕಂಬದ ವಿಲೇವಾರಿಗೆ ವಿದ್ಯುತ್ ಮಂಡಳಿಯು ಕಿಬ್ಬಿಗೆ 90,000 ರೂ. ವೆಚ್ಚವಾಗುವ ಬಗ್ಗೆ ವರದಿ ನೀಡಲಾಗಿತ್ತು. ಆದರೆ ಕಾಮಗಾರಿ ಆರಂಭಿಸುವ ಹೊತ್ತಿಗೆ ವಿದ್ಯುತ್ ಕಂಬ ವಿಲೇವಾರಿ ನಡೆಸದಿದ್ದರಿಂದ ಗತ್ಯಂತರವಿಲ್ಲದೆ ಡಾಮರೀಕರಣ ನಡೆಸಬೇಕಾಯಿತೆಂದು ತಿಳಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಯಾವುದೇ ಸಮನ್ವಯವಿಲ್ಲ ಮತ್ತು ಸಾಮಾನ್ಯ ಜ್ಞಾನವಂತೂ ಇಲ್ಲವೇ ಇಲ್ಲ ಎನ್ನುವುದಕ್ಕೆ ಇದು ಉದಾಹರಣೆಯಾಗಿದ್ದು ಪ್ರಯಾಣಿಕರ ಸಂಕಷ್ಟಕ್ಕೆ ಪ್ರಯಾಣಿಕರೇ ಕಾರಣ ಎಂಬ ಸ್ಥಿತಿ ಇದೆ. ಇದರೊಂದಿಗೆ ಈ ಸಮಸ್ಯೆಯ ಬಗ್ಗೆ ದೂರುಗಳು ಕೇಳಿಬರುತ್ತಿರುವಂತೆ ಕಿಬ್ಬಿಯ ಅಧಿಕೃತರು ಅಲ್ಲೊಂದು ಅಪಾಯ ಸೂಚನೆಯ ಫಲಕ ಹಾಕಿದರೆ ಸಾಕೆಂದು ತಿಳಿಸಿದ್ದು ಫಿತ್ತ ನೆತ್ತಿಗೇರುವಂತೆ ಮಾಡಿದೆ.