ಕಣ್ಣೂರು: ಕೇರಳ ವಿಧಾನಸಭಾ ಚುನಾವಣೆಗೆ ಇನ್ನೇನು ಮೂರು ದಿನಗಳು ಉಳಿದಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಕೇರಳ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ.
'ಎಲ್‌ಡಿಎಫ್ ನೇತೃತ್ವದ ಸರ್ಕಾರವು ಖಾಸಗಿ ಸಂಸ್ಥೆಯೊಂದಿಗೆ ಹೆಚ್ಚಿನ ಬೆಲೆಯಲ್ಲಿ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ' ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ದೂರಿದ್ದಾರೆ.
'ಕೇರಳ ಸರ್ಕಾರವು ಹೆಚ್ಚಿನ ಬೆಲೆಯಲ್ಲಿ 300 ಮೆಗಾ ವಾಟ್ ವಿದ್ಯುತ್ ಖರೀದಿಸುವ ಒಪ್ಪಂದವನ್ನು ಅದಾನಿ ಸಮೂಹದೊಂದಿಗೆ ಮಾಡಿಕೊಂಡಿದೆ. ಇದರಲ್ಲಿ ಎಲ್‌ಡಿಎಫ್ ಸರ್ಕಾರವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿದೆ. ಕೇರಳ ಮತ್ತು ಕೇಂದ್ರ ಸರ್ಕಾರವು ಈ 'ಭ್ರಷ್ಟ ಒಪ್ಪಂದ' ಮಾಡಿಕೊಂಡಿವೆ' ಎಂದು ಅವರು ಆರೋಪಿಸಿದ್ದಾರೆ.
'ಕೇರಳ ಸರ್ಕಾರವು ₹8850 ಕೋಟಿ ಮೌಲ್ಯದ ವಿದ್ಯುತ್ ಖರೀದಿಸಲು ಅದಾನಿ ಸಮೂಹದೊಂದಿಗೆ 25 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಅದಾನಿ ಸಂಸ್ಥೆ ₹1000 ಕೋಟಿಯಷ್ಟು ಲಾಭ ಗಳಿಸಬಹುದು' ಎಂದು ಅವರು ಹೇಳಿದರು.
'ಇದು ಜನರ ಮೇಲೆ ಹೊರೆಯಾಗಲಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಜವಾಬ್ದಾರರು. ಪ್ರಸ್ತುತ ಸಮಯದಲ್ಲಿ ಸೌರ ಶಕ್ತಿ ಅಗ್ಗದ ದರದಲ್ಲಿ ಸಿಗುತ್ತಿದೆ (ಯುನಿಟ್‌ಗೆ ₹2). ಆದರೂ ಖಾಸಗಿ ಸಂಸ್ಥೆಯಿಂದ ಪ್ರತಿ ಯುನಿಟ್‌ಗೆ ₹2.82 ನೀಡಿ, ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ. 2019ರ ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಕೇಂದ್ರದ ಸೌರ ಶಕ್ತಿ ನಿಗಮ ಲಿಮಿಟೆಡ್ (ಎಸ್‌ಇಸಿಎಲ್) ಜತೆ ರಾಜ್ಯ ವಿದ್ಯುತ್ ಮಂಡಳಿಯು ಒಪ್ಪಂದ ಮಾಡಿಕೊಂಡಿದೆ. ಇದು ಅದಾನಿ ಸಮೂಹದೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ' ಎಂದು ಅವರು ದೂರಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಎಲ್‌ಡಿಎಫ್ ಸರ್ಕಾರದಡಿಯಲ್ಲಿ ಐದು ವರ್ಷಗಳಲ್ಲಿ ಒಮ್ಮೆಯೂ ಲೋಡ್ ಶೆಡ್ಡಿಂಗ್ ಆಗಿಲ್ಲ ಎಂಬುದರ ಬಗ್ಗೆ ಚೆನ್ನಿತ್ತಲ ಅವರಿಗೆ ಅಸೂಯೆ ಇದೆ. ಹಾಗಾಗಿ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.