ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕೊರೋನಾ ಕರ್ಫ್ಯೂ ಜಾರಿಗೊಳಿಸಲಾಗುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರ ಇಂದು ಕೊರೋನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟಿಸಿದ್ದು, ನಾಳೆ ರಾತ್ರಿ 10 ರಿಂದ ಏಪ್ರಿಲ್ 20ರ ವರೆಗೆ ಕೊರೋನಾ ಕರ್ಫ್ಯೂ ಜಾರಿಯಲ್ಲಿರಲಿದ್ದು, ರಾತ್ರಿ 10ರ ನಂತರ ದಿನಸಿ ಅಂಗಡಿ, ದರ್ಶನಿ, ಬಾರ್, ಪಬ್, ಹೋಟೆಲ್, ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಲಿವೆ.
ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದ್ದು, ವೈದ್ಯಕೀಯ ತುರ್ತು ಸೇವೆ, ಹೋಂ ಡೆಲಿವರಿ, ಇ-ಕಾಮರ್ಸ್ ವಾಹನಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ ರಾತ್ರಿ ಬಸ್ ಮತ್ತು ರೈಲು ಸೇವೆಗೆ ಅವಕಾಶ ನೀಡಿದ್ದು, ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ತೆರಳಲು ಅಧಿಕೃತ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರ್ಖಾನೆಗಳು, ಕಂಪನಿಗಳು ಯಥಾರೀತಿ ಕಾರ್ಯ ನಿರ್ವಹಿಸಲಿವೆ. ಆದರೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಅಥವಾ ನೌಕರರು ಕೊರೋನಾ ಕರ್ಫ್ಯೂ ಅವಧಿಗೂ ಮುನ್ನವೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.