ನವದೆಹಲಿ: ಭಾರತದಲ್ಲಿ ಕೆಲವು ವಾರಗಳಿಂದೀಚೆಗೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಲಾಕ್‌ಡೌನ್ ಮಾಡುವ ಆಲೋಚನೆಯಲ್ಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಲಾಕ್‌ಡೌನ್ ಮಾಡುವ ಚಿಂತನೆಯಿಲ್ಲ. ಸೋಂಕಿನ ಪ್ರಕರಣಗಳು ಹೆಚ್ಚಿರುವ ಕಡೆಯಲ್ಲಿ ಸ್ಥಳೀಯವಾಗಿ ಕಂಟೇನ್ಮೆಂಟ್ ಝೋನ್‌ಗಳನ್ನು ನಿರ್ಮಾಣ ಮಾಡಬಹುದಷ್ಟೆ ಎಂದು ಮಂಗಳವಾರ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ವರ್ಲ್ಡ್ ಬ್ಯಾಂಕ್ ಗ್ರೂಪ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ದೇಶದ ಅಭಿವೃದ್ಧಿಗೆ ಹಣಕಾಸಿನ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ತಡೆಗೆ ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಹಾಗೂ ಕೊರೊನಾ ನಿಯಮವಾವಳಿ ಸೇರಿದಂತೆ ಭಾರತ ಕೈಗೊಂಡಿರುವ ಕ್ರಮಗಳ ಕುರಿತು ಟ್ವೀಟ್ ಮೂಲಕ ವಿವರಿಸಿದ್ದಾರೆ.
"ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿಯೂ ನಾವು ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿದ್ದೇವೆ. ದೊಡ್ಡ ಮಟ್ಟದಲ್ಲಿ ಲಾಕ್‌ಡೌನ್ ಹೇರುವುದಿಲ್ಲ. ದೇಶದ ಆರ್ಥಿಕತೆ ಮೇಲೆ ಸೋಂಕು ಪರಿಣಾಮ ಬೀರಲು ಬಿಡುವುದಿಲ್ಲ. ರೋಗಿಗಳನ್ನು ಐಸೊಲೇಷನ್‌ನಲ್ಲಿಡುವುದು ಹಾಗೂ ಲಸಿಕೆ ಮೂಲಕವೇ ಕೊರೊನಾ ನಿಯಂತ್ರಣಕ್ಕೆ ಬದ್ಧವಾಗಿದ್ದೇವೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ" ಎಂದು ಪುನರುಚ್ಚರಿಸಿದ್ದಾರೆ.
ವಿಡಿಯೋ ಸಂವಾದದಲ್ಲಿ, ದೇಶದಲ್ಲಿ ಕೊರೊನಾ ಲಸಿಕೆ ಉತ್ಪಾದನೆಯ ಸಾಮರ್ಥ್ಯದ ಕುರಿತು ಚರ್ಚಿಸಲಾಯಿತು. ಇದಕ್ಕೆ ವಿಶ್ವ ಬ್ಯಾಂಕ್‌ನ ಸಹಾಯವೂ ಇರುವುದಾಗಿ ಮಾಲ್ಪಾಸ್ ಭರವಸೆ ನೀಡಿದರು.
ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಪುನಃ ಒಂದೂವರೆ ಲಕ್ಷದ ಗಡಿ ದಾಟಿದೆ. ಸೋಮವಾರ 1,61,736 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ.