ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಬೆಂಬಲ ನೀಡುವ ಅಥವಾ ಅವರ ಬೆಂಬಲ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಮುಖ್ಯಮಂತ್ರಿಯವರು ಚುನಾವಣೆ ಸಂದರ್ಭ ಕೋಮು ರಾಜಕಾರಣ ಮಾಡುತ್ತಿದ್ದಾರೆ. ಸಂಖ್ಯಾಬಲ ಕಡಿಮೆಯಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಕೈಜೋಡಿಸುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರಿಂದಾಗಿ ಬಿಜೆಪಿ ಮತ್ತು ಕೋಮು ರಾಜಕಾರಣ ಕಾಣಿಸಿಕೊಂಡಿದೆ. ಚುನಾವಣೋತ್ತರದಲ್ಲಿ ಟಿಎಂಸಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಕಾಂಗ್ರೆಸ್-ಎಡಪಕ್ಷ-ಐಎಸ್‌ಎಫ್ ಸಂಯುಕ್ತ ಮೋರ್ಚಾ ಮೈತ್ರಿಯು ಟಿಎಂಸಿಯಿಂದ ಬೆಂಬಲ ಪಡೆಯುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.