ಕಾನ್ಪುರ್: ಆರೋಗ್ಯ ಕಾರ್ಯಕರ್ತೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಲೇ ಮಹಿಳೆಯೊಬ್ಬರಿಗೆ ಒಂದೇ ಬಾರಿ ಎರಡು ಡೋಸ್ ಕೊರೋನಾ ಲಸಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಅಕ್ಬರ್ಪುರ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಆರೋಗ್ಯ ಕಾರ್ಯಕರ್ತೆ ಅರ್ಚನಾ ಅವರು 50 ವರ್ಷದ ಕಮಲೇಶ್ ಕುಮಾರಿ ಎಂಬ ಮಹಿಳೆಗೆ ಒಂದೇ ಬಾರಿಗೆ ಎರಡು ಡೋಸ್ ಲಸಿಕೆ ನೀಡಿದ್ದಾರೆ. ಲಸಿಕೆ ನೀಡುತ್ತಿದ್ದ ವೇಳೆ ಆರೋಗ್ಯ ಕಾರ್ಯಕರ್ತೆ ದೂರವಾಣಿ ಕರೆಯಲ್ಲಿದ್ದರು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಸುದ್ದಿ ಮಹಿಳೆಯ ಕುಟುಂಬ ಸದಸ್ಯರಿಗೆ ತಲುಪುತ್ತಿದ್ದಂತೆ, ಲಸಿಕಾ ಕೇಂದ್ರಕ್ಕೆ ಆಗಮಿಸಿ ಗಲಾಟೆ ಮಾಡಿದರು. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.
ಕಮಲೇಶ್ ಕುಮಾರಿ ತನಗೆ ಎರಡು ಬಾರಿ ಏಕೆ ಲಸಿಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಅರ್ಚನಾ ತನ್ನ ತಪ್ಪಿಗೆ ಕ್ಷಮೆಯಾಚಿಸುವ ಬದಲು ಮಹಿಳೆಯನ್ನೇ ಗದರಿಸಿ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎರಡು ಬಾರಿ ಲಸಿಕೆ ಹಾಕಿದ್ದರಿಂದ ಕುಮಾರಿ ಅವರ ಕೈ ಊತುಕೊಂಡಿದೆ, ಆದರೆ ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸಿಬ್ಬಂದಿಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಘಟನೆಯ ಬಗ್ಗೆ ಶನಿವಾರ ಸಂಜೆ ವೇಳೆಗೆ ವರದಿ ನೀಡುವಂತೆ ಸಿಎಂಒಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಅವರು ಹೇಳಿದ್ದಾರೆ.