ನವದೆಹಲಿ : ಕೊರೊನಾ ಸೋಂಕಿಗೆ ಟ್ಯಾಮಿಫ್ಲೂನಂತೆ ಕೆಲಸ ಮಾಡುವ ಭರವಸೆ ವ್ಯಕ್ತವಾಗಿದ್ದ ಮಾತ್ರೆಯೊಂದರ ಕುರಿತ ಪ್ರಾಥಮಿಕ ಅಧ್ಯಯನದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆತಿರುವುದಾಗಿ ಔಷಧ ಅಭಿವೃದ್ಧಿ ಸಂಸ್ಥೆ ಮಾಹಿತಿ ನೀಡಿದೆ.
ರಿಡ್ಜ್‌ಬ್ಯಾಕ್ ಬಯೋಥೆರಾಪ್ಯುಟಿಕ್ ಎಲ್‌ಪಿ ಹಾಗೂ ಮರ್ಕ್ ಅಂಡ್ ಕೊ ಅಭಿವೃದ್ಧಿಪಡಿಸಿದ ಮಾತ್ರೆಯು ಸೋಂಕಿನ ಸಾಧ್ಯತೆಯನ್ನು ಗಣನೀಯವಾಗಿ ತಗ್ಗಿಸಿದ್ದು, ಐದು ದಿನಗಳ ಚಿಕಿತ್ಸೆ ನಂತರ ಗುಣಮುಖರಾಗಬಹುದು ಎಂದು ಅಧ್ಯಯನದ ಮಧ್ಯಂತರ ಪ್ರಯೋಗ ಸಾಬೀತುಪಡಿಸಿರುವುದಾಗಿ ತಿಳಿದುಬಂದಿದೆ.
ಈಚೆಗೆ ನಡೆದ ಸಭೆಯೊಂದರಲ್ಲಿ ರಿಡ್ಜ್‌ಬ್ಯಾಕ್ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಕುರಿತು ಇನ್ನಷ್ಟು ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿಸಿದೆ.
ಈ ಮಾತ್ರೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಮರ್ಥ ಎಂದು ಕಂಡುಬಂದರೆ, ಸದ್ಯಕ್ಕೆ ಲಭ್ಯವಿರುವ ಕೊರೊನಾ ಚಿಕಿತ್ಸೆಗೆ ಮತ್ತೊಂದು ಆಯ್ಕೆಯಾಗಲಿದೆ ಹಾಗೂ ಲಸಿಕೆ ಹೊರತಾಗಿ ಇರುವ ಮತ್ತೊಂದು ಆಯ್ಕೆ ಎನಿಸಲಿದೆ.
ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ವರ್ಷ ಕಳೆದರೂ ಜನರಿಗೆ ಚಿಕಿತ್ಸೆಯ ಆಯ್ಕೆಗಳು ಕೆಲವೇ ಕೆಲವು ಇವೆ. ಸದ್ಯಕ್ಕೆ ಗೈಲೀಡ್ ಸೈನ್ಸ್ ಇಂಕ್‌ನ ರೆಮ್ಡಿಸಿವಿರ್ ಅನ್ನು ಮಾತ್ರ ಬಳಸಲಾಗುತ್ತಿದೆ. ಆಸ್ಪತ್ರೆಗೆ ಸೇರಿದ ರೋಗಿಗಳಿಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ.
ಸದ್ಯಕ್ಕೆ ಪ್ರಯೋಗದಲ್ಲಿರುವ ಮಾಲ್ನುಪಿರಾವಿರ್ ಮಾತ್ರೆಯು ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ಉತ್ತಮ ಪರಿಣಾಮ ಬೀರಬಲ್ಲದು ಎಂದು ತಿಳಿದುಬಂದಿದೆ.