ನವದೆಹಲಿ: ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಭಾರತದಲ್ಲಿ ಬೇಸಿಗೆಯಲ್ಲಿ ಬೀಳುವ ಮಳೆ ಹೆಚ್ಚು ಹಾನಿಯುಂಟು ಮಾಡುವ ಶಕ್ತಿ ಹೊಂದಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಮುಂಬರುವ ದಿನಗಳಲ್ಲಿ ಬೇಸಿಗೆ ದಿನಗಳಲ್ಲಿ ಬೀಳುವ ಮಳೆ ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರುವುದು. ಅವರ ಆರ್ಥಿಕತೆ, ಆಹಾರ ಪದ್ಧತಿ ಹಾಗೂ ಕೃಷಿ ವ್ಯವಸ್ಥೆ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಎಂದು 'ಅರ್ಥ್ ಸಿಸ್ಟಂ ಡೈನಾಮಿಕ್ಸ್' ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ಜರ್ಮನಿ ಮೂಲದ ಪಾಟ್ಸ್‌ಡ್ಯಾಮ್ ಇನ್ಸ್‌ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ ಎಂಬ ಸಂಸ್ಥೆಯು ವಿಶ್ವದ ವಿವಿಧ ಭಾಗಗಳ 30ಕ್ಕೂ ಹೆಚ್ಚು ಹವಾಮಾನ ಮಾದರಿಗಳನ್ನು ಅಧ್ಯಯನ ಮಾಡಿ, ಈ ವರದಿಯನ್ನು ಸಿದ್ಧಪಡಿಸಿದೆ.
'ವಾತಾವರಣದ ತಾಪಮಾನದಲ್ಲಿ ಪ್ರತಿ ಡಿಗ್ರಿ ಸೆಲ್ಸಿಯಸ್ ಹೆಚ್ಚಳಕ್ಕೆ ಪ್ರತಿಯಾಗಿ ಶೇ 5ರಷ್ಟು ಹೆಚ್ಚು ಮಳೆ ಬೀಳುವುದು. ಈ ಪ್ರತಿಪಾದನೆಯನ್ನು ಪುಷ್ಟೀಕರಿಸುವ ಸಾಕಷ್ಟು ಪುರಾವೆಗಳು ಅಧ್ಯಯನ ವೇಳೆ ಲಭಿಸಿವೆ' ಎಂದು ಸಂಸ್ಥೆಯ ಸಂಶೋಧಕರಾದ ಅಂಜಾ ಕಜೆಂಬರ್ಗರ್ ಹೇಳಿದ್ದಾರೆ.