ತಿರುವನಂತಪುರ: ಕೋವಿಡ್ ಎರಡನೇ ಹಂತದ ಅಲೆಯನ್ವಯ ಸರ್ಕಾರದ ನಿಯಂತ್ರಣ ಬಿಗಿಗೊಳ್ಳುತ್ತಿರುವ ಮಧ್ಯೆ ಮನೆಬಾಗಿಲಿಗೆ ಮದ್ಯ ತಲುಪಿಸುವ ಯೋಜನೆ ಜಾರಿಗೆ ಬೆವ್‍ಕೋ'ಅಧಿಕಾರಿಗಳು É ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ತಿರುವನಂತಪುರ ಹಾಗೂ ಎರ್ನಾಕುಳಂ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳ್ಳಲಿದೆ. ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿಯನ್ನು ಈ ವಾರ ಸಲ್ಲಿಸಲು ಬೆವ್‍ಕೋ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಕೊರೊನಾ ಎರಡನೇ ಹಂತದ ಅಲೆ ತೀವ್ರಗೊಳ್ಳುತ್ತಿರುವುದನ್ನು ಮನಗಂಡು ಹೋಮ್ ಡೆಲಿವರಿ ಸಾಧ್ಯತೆಯನ್ನು ಬಿವರೇಜಸ್ ನಿಗಮ ಪರಿಶೀಲಿಸುತ್ತಿದೆ. ಅಗತ್ಯವುಳ್ಳವರಿಗೆ ಮದ್ಯವನ್ನು ಬೆವ್‍ಕೋ ಮೂಲಕ ಮನೆಬಾಗಿಲಿಗೆ ವಿತರಿಸುವುದು ಅಥವಾ ಏಜನ್ಸಿಗಳಿಗೆ ಇದರ ಹೊಣೆ ವಹಿಸಿಕೊಡುವ ಬಗ್ಗೆಯೂ ತೀರ್ಮಾನವಾಗಬೇಕಾಗಿದೆ.
ಕಳೆದ ಬಾರಿ ಮೊದಲ ಹಂತದ ಕೋವಿಡ್ ವ್ಯಾಪಿಸುತ್ತಿದ್ದ ಸಂದರ್ಭ ಏಕಾಏಕಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಲಭ್ಯವಾಗದಿರುವುದರಿಂದ ಕೆಲವರು ವಿಕೃತವಾಗಿ ವರ್ತಿಸಿರುವುದಲ್ಲದೆ, ಆತ್ಮಹತ್ಯೆಗೆ ಯತ್ನಿಸಿರುವುದೂ ವರದಿಯಾಗಿತ್ತು. ನಂತರ ಸರ್ಕಾರಿ ವೈದ್ಯರ ಶಿಫಾರಸುಪತ್ರ ಹೊಂದಿದವರಿಗೆ ಮದ್ಯ ವಿತರಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಈ ಪತ್ರ ನೀಡಲು ವೈದ್ಯರು ತಯಾರಾಗಿರಲಿಲ್ಲ. ಇದರಿಂದ ಯೋಜನೆಯನ್ನೂ ಅರ್ಧಕ್ಕೆ ಕೈಬಿಡಲಾಗಿತ್ತು. ಹೋಮ್ ಡೆಲಿವರಿಗೆ ಸರ್ಕಾರ ಹಸಿರು ನಿಶಾನಿ ತೋರಿಸಿದಲ್ಲಿ 'ಬೆವ್‍ಕೋ'ಮಾದರಿಯಲ್ಲಿ ಹೊಸ ಆ್ಯಪ್ ಬರಲಿದೆ. ಮದ್ಯ ಮನೆ ಬಾಗಿಲಿಗೆ ತಲುಪಿಸುವ ಬೆವ್‍ಕೋ ತೀರ್ಮಾನಗಳೆಲ್ಲವೂ ಸರ್ಕಾರದ ಮಾನದಂಡದಂತೆ ಜಾರಿಯಾಗಲಿರುವುದಾಗಿ ಬೆವ್‍ಕೋ ಎಂ.ಡಿ ಯೋಗೇಶ್ ಗುಪ್ತಾ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಹೋಮ್ ಡೆಲಿವರಿ ಮೂಲಕ ಒಂದಷ್ಟು ನಷ್ಟದ ಪ್ರಮಾಣ ತಗ್ಗಿಸಲು ಸಾಧ್ಯವಾಗಲಿರುವುದಾಗಿ ಬೆವ್‍ಕೋ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.