ನವದೆಹಲಿ : ಭಾರತ ಎದುರಿಸುತ್ತಿರುವ ಕೊರೊನಾವೈರಸ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಬೆಂಬಲ ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಜೊತೆಗೆ ಫೋನ್ ಸಂಭಾಷಣೆ ಮೂಲಕ ಮಾತನಾಡಿದ್ದಾರೆ.
ಕೊವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಯುರೋಪಿಯನ್ ಒಕ್ಕೂಟ, ಜರ್ಮನಿ, ಫ್ರಾನ್ಸ್ ಸೇರಿದಂತೆ ರಾಷ್ಟ್ರಗಳು ಸಹಾಯಹಸ್ತ ನೀಡುವುದಕ್ಕೆ ಮುಂದೆ ಬಂದಿವೆ. ಅಮೆರಿಕಾ ಮತ್ತು ಭಾರತದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದು, ನೆರವು ನೀಡಲು ಮುಂದಾಗಿರುವ ಜೋ ಬಿಡೆನ್ ಅವರಿಗೆ ಧನ್ಯವಾದ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
" ಪೋಟಸ್ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಜೊತೆಗೆ ನಡೆಸಿದ ಸಂಭಾಷಣೆ ಫಲಪ್ರದವಾಗಿದೆ. ಉಭಯ ರಾಷ್ಟ್ರಗಳಲ್ಲಿನ ಕೊವಿಡ್-19 ಪರಿಸ್ಥಿತಿ ಬಗ್ಗೆ ನಾವು ವಿವರವಾಗಿ ಚರ್ಚಿಸಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಬೆಂಬಲ ನೀಡುತ್ತಿದ್ದು, ಅದಕ್ಕಾಗಿ ನಾನು ಅಧ್ಯಕ್ಷ ಬಿಡನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕೊವಿಶೀಲ್ಡ್ ಲಸಿಕೆಯ ಕಚ್ಚಾವಸ್ತು ರವಾನೆ:
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಲಸಿಕೆಯ ಕಚ್ಚಾವಸ್ತುಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಹೇಳಿತ್ತು. ಇದರ ಜೊತೆಗೆ ಕೊರೊನಾವೈರಸ್ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುವುದು ಎಂದು ಘೋಷಿಸಿತ್ತು.
ದೇಶದಲ್ಲಿ ಭೀತಿ ಹೆಚ್ಚಿಸಿದ ಕೊವಿಡ್-19 ಸೋಂಕು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 2812 ಮಂದಿ ಪ್ರಾಣ ಬಿಟ್ಟಿದ್ದು, 2,19,272 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟು 1,73,13,163 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೆ 1,43,04,382 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,95,123 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 28,13,658 ಕೊವಿಡ್-19 ಸಕ್ರಿಯ ಪ್ರಕರಣಗಳ ದಾಖಲಾಗಿವೆ.