ನವದೆಹಲಿ: ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಹೊಡೆತ ನೀಡಿದ್ದು, ಪಿಪಿಎಫ್, ಕೆವಿಪಿ, ಇನ್ನಿತರ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.
2021-22 ರ ಮೊದಲ ತ್ರೈಮಾಸಿಕದಲ್ಲಿ ಮೋದಿ ಸರ್ಕಾರ ಎನ್‌ಎಸ್ ಸಿ, ಪಿಪಿಎಫ್ ಉಳಿತಾಯದ ಮೇಲಿನ ಬಡ್ಡಿ ದರವನ್ನು ಶೇ.1.1 ರಷ್ಟು ಕಡಿಮೆ ಮಾಡಿದೆ.
ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಕುಸಿತವಾಗುತ್ತಿರುವುದರ ಬೆನ್ನಲ್ಲೇ ಮೋದಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಿಪಿಎಫ್ ಮೇಲಿನ ಬಡ್ಡಿ ದರವನ್ನು ಶೇ.0.7 ರಷ್ಟು ಅಂದರೆ ಶೇ. 6.4 ರಷ್ಟಕ್ಕೆ ಕಡಿತಗೊಳಿಸಲಾಗಿದೆ. ಎನ್‌ಎಸ್ ಸಿ ಮೇಲಿನ ಬಡ್ಡಿ ದರವನ್ನು ಶೇ.5.9 ರಷ್ಟಕ್ಕೆ ಇಳಿಕೆ ಮಾಡಲಾಗಿದೆ.
ಏಪ್ರಿಲ್ 1 ರಿಂದ ಜೂ.30 ವರೆಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ತರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮೂರು ತಿಂಗಳಿಗೊಮ್ಮೆ ಪಾವತಿಯಾಗುವ ನಾಗರಿಕರ ಉಳಿತಾಯ ಯೋಜನೆಗಳಿಗೂ ಕತ್ತರಿ ಬಿದ್ದಿದ್ದು ಶೇ.6.5 ರಷ್ಟಕ್ಕೆ ಇಳಿಕೆ ಮಾಡಲಾಗಿದ್ದರೆ ಇದೇ ಮೊದಲ ಬಾರಿಗೆ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.5 ರಷ್ಟು ಅಂದರೆ ಈಗಿದ್ದ ಶೇ.4 ರಿಂದ ಶೇ.3.5 ರಷ್ಟಕ್ಕೆ ಇಳಿಕೆ ಮಾಡಲಾಗಿದೆ.
ಎರಡು ವರ್ಷಗಳ ಸ್ಥಿರ ಠೇವಣಿಗೆ ಶೇ.5 ಕ್ಕಿಂತ ಕಡಿಮೆ ಬಡ್ಡಿ ದೊರೆತರೆ ಮೂರು ವರ್ಷಗಳ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ.0.4 ರಷ್ಟು ಕಡಿಮೆ ಮಾಡಲಾಗಿದೆ. 5 ವರ್ಷಗಳ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.5.8 ರಷ್ಟಕ್ಕೆ ಇಳಿಕೆ ಮಾಡಲಾಗಿದೆ.
ಸುಕನ್ಯ ಸಮೃದ್ಧಿ ಯೋಜನೆ, ಮುಂದಿನ ತ್ರೈಮಾಸಿಕದ ವೇಳೆಗೆ ಶೇ.6.9 ರಷ್ಟು ಬಡ್ಡಿ ದರ ನೀಡಲಿದ್ದರೆ, ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಡ್ಡಿ ದರ ಶೇ.6.9 ರಿಂದ ಶೇ.6.2 ಕ್ಕೆ ಇಳಿಕೆ ಮಾಡಲಾಗಿದೆ.